ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಇತ್ತ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ಅವಲೋಕಿಸುತ್ತಿರುವ ನಡುವೆಯೇ ಸ್ವಪಕ್ಷೀಯರ ವಿರುದ್ಧವೇ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಈ ಬಗ್ಗೆ ಮಾತನಾಡಿದ ಯತ್ನಾಳ್ (Basangouda Patil Yatnal), ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೀನಾಯ ಸೋಲಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಜೊತೆಗೆ ಮಾಡಿಕೊಂಡ ಒಳಒಪ್ಪಂದವೇ ಕಾರಣ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ತಂದೆ ಹಾಗೂ ಮಗನೇ ಕಾರಣ. ಇಂಥ ಸೋಲನ್ನು ನಾವು ನಿರೀಕ್ಷಿಸಿರಲಿಲ್ಲ. ಇನ್ನಾದರೂ ಪಕ್ಷದ ಹೈಕಮಾಂಡ್‌ನವರು ತಂದೆ–ಮಗನ ಮೇಲಿನ ಮೋಹ ಬಿಡಬೇಕು. ಒಳ ಒಪ್ಪಂದದಿಂದಲೇ ಬಿಜೆಪಿಗೆ ಇಂಥ ದುಃಸ್ಥಿತಿ ಬಂದಿದೆ. ಹೈಕಮಾಂಡ್ ಈಗಲಾದರೂ ಪ್ರಮಾಣಿಕರನ್ನು, ಸಂಸ್ಕಾರ ಇರುವವರನ್ನು ರಾಜ್ಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದರೆ ಒಳ್ಳೆಯದು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಕೇವಲ ಸಂದೇಶ ನೀಡುವ ಕೆಲಸ ಮಾಡಿದ ಕಾರಣದಿಂದಲೇ ಈ ಸೋಲಾಗಿದೆ ಎಂದು ಕಾರಣವನ್ನು ಉಲ್ಲೇಖಿಸಿದ್ದಾರೆ.
ಕರ್ನಾಟಕದಲ್ಲಿ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ವಿಚಾರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದೆ. ವಕ್ಫ್ ಬೋರ್ಡ್‌ನಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬರಲ್ಲ ಅಂತಿದ್ರು. ಔರಂಗಜೇಬನ ಸಮಾಧಿಗೆ ನಮಸ್ಕರಿಸಿದ್ದರಿಂದ ಮಹಾರಾಷ್ಟ್ರ ಜನ ಉದ್ಧವ್ ಠಾಕ್ರೆ ಅವರನ್ನು ರಾಜಕೀಯವಾಗಿ ಮುಗಿಸಿದರು. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.