ನ್ಯೂಸ್

ಜಾರ್ಖಂಡ್​ನಲ್ಲಿ ಒಂದೇ ಕುಟುಂಬದ ಮೂವರ ಬರ್ಬರ ಕೊಲೆ: ವಾಮಾಚಾರದ ಶಂಕೆ| Murder

Murder: ಜಾರ್ಖಂಡ್​ನ ಲೋಜರ್ದಗಾ ಜಿಲ್ಲೆಯಲ್ಲಿ ಬುಧವಾರ(ಅ. 08) ತಡರಾತ್ರಿ ಒಂದೇ ಕುಟುಂಬದ ಮೂವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಘಟನೆಯನ್ನು ವಾಮಾಚಾರದ ಶಂಕೆ ಎಂದು ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಪೆಶ್ರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆಕ್ರಾಂಗ್ ಬಾರ್ಟೋಲಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮಣ್ ನಾಗೇಸಿಯಾ(47), ಅವರ ಪತ್ನಿ ಬಿಫಾನಿ ನಾಗೇಸಿಯಾ(45) ಹಾಗೂ ಅವರ ಒಂಬತ್ತು ವರ್ಷದ ಮಗ ರಾಮ್‌ವಿಲಾಸ್ ನಾಗೇಸಿಯಾ ಎಂದು ಗುರುತಿಸಲಾಗಿದೆ.

ದುಷ್ಕರ್ಮಿಗಳು ಮೂವರು ನಿದ್ದೆ ಮಾಡುತ್ತಿದ್ದಾಗ ಕೊಡಲಿ ಮತ್ತು ಗುದ್ದಲಿ ಸೇರಿದಂತೆ ಹರಿತವಾದ ಆಯುಧಗಳನ್ನು ಬಳಸಿ ಕತ್ತು ಸೀಳಿದ್ದಾರೆ. ಕೊಲೆ ಬಳಿಕ ಮನೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಮನೆಯವರು ಬಹಳ ಸಮಯದಿಂದ ಬಾಗಿಲು ತೆರೆಯದ ಕಾರಣ ನೆರೆಹೊರೆಯವರು ಅನುಮಾನಗೊಂಡು ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ನೆರಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸ್‌ಡಿಪಿಒ ವೇದಾಂತ್ ಶಂಕರ್ ಮತ್ತು ಪೆಶ್ರಾರ್ ಸ್ಟೇಷನ್ ಹೌಸ್ ಆಫೀಸರ್ ವೀರೇಂದ್ರ ಕುಮಾರ್ ಪೊಲೀಸ್ ತಂಡದೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಳಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಎಸ್‌ಡಿಪಿಒ ವೇದಾಂತ್ ಶಂಕರ್, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರಾಥಮಿಕವಾಗಿ ವಾಮಾಚಾರದಿಂದ ನಡೆದಿದೆ ಎಂಉದ ತಿಳಿದು ಬಂದಿದೆ. ಈ ಬಗ್ಗೆಯೂ ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುತ್ತಿದೆ. ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)