ಬೆಂಗಳೂರು: ಕೋರಮಂಗಲದ ಪೇಯಿಂಗ್ ಗೆಸ್ಟ್‌ಗೆ(ಪಿ.ಜಿ) ನುಗ್ಗಿ ಯುವತಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆ ಪೊಲೀಸರು ೧೨೦೫ ಪುಟಗಳಿರುವ ಚಾರ್ಜ್‌ಶೀಟ್ ಅನ್ನು ಶನಿವಾರ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಮೂಲದ ಆರೋಪಿ ಅಭಿಷೇಕ್ ೋಸಿ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ೧೨೦೫ ಪುಟಗಳುಳ್ಳ ಮತ್ತು ೮೫ ಸಾಕ್ಷಿಗಳ ಹೇಳಿಕೆ ಇರುವ ಚಾಜರ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನೂತನ ಕಾನೂನಿನಡಿ ಬೆಂಗಳೂರಿನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾದ ಮೊದಲ ಪ್ರಕರಣ ಇದಾಗಿದೆ. ಪ್ರಕರಣ ನಡೆದು ೩೮ ದಿನಗಳೊಳಗೆ ಕೋರಮಂಗಲ ಠಾಣೆ ಪೊಲೀಸರು ಮೊದಲ ಚಾರ್ಚ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಆ.೨೩ ರಂದು ರಾತ್ರಿ ೧೧.೩೦ ರ ವೇಳೆ ಕೋರಮಂಗಲದ ಪಿ.ಜಿ ನುಗ್ಗಿದ್ದ ಆರೋಪಿ ಅಭಿಷೇಕ್(೨೩), ಕೃತಿ ಕುಮಾರಿ ಎಂಬ ಯುವತಿಯನ್ನು ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.
ಬಿಹಾರ ಮೂಲದ ಕೃತಿ ಮತ್ತು ಮಧ್ಯಪ್ರದೇಶ ಮೂಲದ ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಪಿ.ಜಿ.ಯಲ್ಲಿ ನೆಲೆಸಿದ್ದರು. ಮಧ್ಯಪ್ರದೇಶ ಮೂಲದ ಯುವತಿಯನ್ನು ಅಭಿಷೇಕ್ ಪ್ರೀತಿಸುತ್ತಿದ್ದ. ಯಾವುದೇ ಕೆಲಸಕ್ಕೆ ಹೋಗದ ಆರೋಪಿ, ಇತ್ತೀಚೆಗೆ ತನ್ನ ಪ್ರೇಯಸಿ ಜತೆಗೆ ಜಗಳ ಮಾಡಿದ್ದ. ಈ ವೇಳೆ ಸ್ಥಳದಲ್ಲಿಯೇ ಇದ್ದ ಕೃತಿಯು ಅಭಿಷೇಕ್ ಜತೆಗೆ ಸ್ನೇಹ ಬಿಟ್ಟುಬಿಡುವಂತೆ ಸ್ನೇಹಿತೆಗೆ ಬುದ್ಧಿವಾದ ಹೇಳಿದ್ದಳು. ಅಲ್ಲದೆ, ಬೇರೆ ಪಿ.ಜಿ.ಗೆ ಸ್ಥಳಾಂತರ ಸಹ ಮಾಡಿಸಿದ್ದಳು. ಈ ವಿಚಾರಕ್ಕೆ ಕುಪಿತಗೊಂಡ ಅಭಿಷೇಕ್, ಯುವತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಆರೋಪಿ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿತ್ತು.