ಬೆಂಗಳೂರು: ಮಂಡ್ಯದ ಹಲ್ಲೆಗೆರೆಯಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ ಶಂಕುಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಆಗಮಿಸುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಡಾ.ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ನಿಯೋಗದ ಜತೆ ಚರ್ಚಿಸಿ ಈ ಭರವಸೆ ನೀಡಿದ್ದಾರೆ.
ಡಿಸೆಂಬರ್‌ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಆಗಮಿಸಲಿದ್ದಾರೆ. ಈ ಗಣ್ಯರ ಆಗಮನಕ್ಕೆ ಮಂಡ್ಯ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುದ್ದೀಪ,ಕುಡಿಯುವ ನೀರು ಮುಂತಾದ ಸೌಕರ್ಯಗಳನ್ನು ಸರ್ಕಾರದಿಂದ ಒದಗಿಸಿ ಕೊಡುವಂತೆ ನಿಯೋಗವು ಮನವಿ ಮಾಡಿತು.
ಈ ಕೇಂದ್ರವು ಹಲ್ಲೆಗೆರೆ, ಮಂಡ್ಯ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ನಿಯೋಗದ ಸದಸ್ಯರು ಕೇಂದ್ರದ ಕಾರ್ಯ ಸ್ವರೂಪ ಮತ್ತು ಟ್ರಸ್ಟ್ ಮಾಡುತ್ತಿರುವ ಸಾಮಾಜಿಕ ಕಾರ್ಯವನ್ನು ವಿವರಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ನಿಮ್ಮ ಜತೆ ನಾವಿದ್ದೇವೆ. ಬೇಕಾದ ಎಲ್ಲ ಬೆಂಬಲ ನೀಡಲಿದ್ದೇವೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ, ಅಮೆರಿಕದ ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಮುಂತಾದವರು ನಿಯೋಗದಲ್ಲಿದ್ದರು.