ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ನಿಮಿತ್ತ ವಿದ್ಯಾರ್ಥಿಗಳಲ್ಲಿ ಗಾಂಧೀಜಿ ಅವರ ಬದುಕು, ಸ್ವಾತಂತ್ರ್ಯ ಚಳವಳಿ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಷಯಗಳ ಕುರಿತು ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ ಹಾಗೂ ಪದವಿ/ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕ ಹಾಗೂ ಕ್ರಮವಾಗಿ ತಲಾ 3 ಸಾವಿರ ರೂ., 2 ಸಾವಿರ ರೂ. ಹಾಗೂ 1 ಸಾವಿರ ರೂ. ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕ ಹಾಗೂ ಕ್ರಮವಾಗಿ ತಲಾ 31 ಸಾವಿರ ರೂ., 21 ಸಾವಿರ ರೂ. ಹಾಗೂ 11 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.
ಪ್ರತಿ ಶಾಲಾ, ಕಾಲೇಜು / ಸ್ನಾತಕೋತ್ತರ ಪದವಿ ವಿಭಾಗಗಳ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿನ ಆಯ್ದ ಅತ್ಯುತ್ತಮ 3 ಪ್ರಬಂಧಗಳನ್ನು ಸೆ.26ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಚೇರಿಗಳಿಗೆ ತಲುಪಿಸಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.