ನ್ಯೂಸ್

ಬಾನು ಮುಷ್ತಾಕ್ ವಿರೋಧಿಸಿದ್ದ ಅರ್ಜಿ ವಜಾ

ಬೆಂಗಳೂರು: ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮಕ್ಕೆ ವಿಭಿನ್ನ ಧರ್ಮದ ವ್ಯಕ್ತಿಯನ್ನು ಆಹ್ವಾನಿಸಿದಲ್ಲಿ ಅರ್ಜಿದಾರರ ಯಾವುದೇ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದಂತಾಗದು ಎಂದಿರುವ ಹೈಕೋರ್ಟ್, ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕು ಎಂದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಲೇಖಕಿ ಬಾನು ಮುಷ್ತಾಕ್ ಅವರು 2023ರಲ್ಲಿ ಭುವನೇಶ್ವರಿ, ಕನ್ನಡ ಬಾವುಟದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಹೇಳಿ ಪೀಠದ ಮುಂದೆ ದಾಖಲೆ ಪ್ರಸ್ತುತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಆ ಹೇಳಿಕೆ ಒಬ್ಬ ವ್ಯಕ್ತಿಯ ಅಭಿಪ್ರಾಯವಾಗಿದೆ. ದೇಶದಲ್ಲಿನ ಪ್ರಜೆ ತಮ್ಮ ಅನಿಸಿಕೆ ತಿಳಿಸಬಾರದು ಎಂಬುವುದು ಎಷ್ಟು ಸರಿ? ನಿಮ್ಮ ಅಭಿಪ್ರಾಯವನ್ನು ನೀವು ಸೂಕ್ತ ವೇದಿಕೆಯಲ್ಲಿ ಹೇಳಲು ಅರ್ಹರಿದ್ದೀರಿ. ಆದರೆ ಸರ್ಕಾರದ ಕ್ರಮದಿಂದ ಸಾಂವಿಧಾನಿಕವಾಗಿ ನಿಮ್ಮ (ಅರ್ಜಿದಾರರ) ಹಕ್ಕು ಉಲ್ಲಂಘನೆಯಾಗಿವಿಯೇ ಆ ಕುರಿತು ತಿಳಿಸಿ ಎಂದಿತು.

ದಸರಾ ಹಬ್ಬ ಪ್ರಮುಖವಾಗಿ ಹಿಂದೂಗಳು ಧಾರ್ಮಿಕ ಹಬ್ಬ. ಈ ಮಹೋತ್ಸವದ ವೇಳೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಸಂಪ್ರದಾಯವಿದೆ. ಇದೆಲ್ಲವೂ ಮುಷ್ತಾಕ್ ನಿಲುವಿಗೆ ವಿರುದ್ಧವಾಗಿದೆ ಎಂದರು.

ಇದಕ್ಕೆ ಪೀಠ, ಅದು ನಿಮ್ಮ ಅಭಿಪ್ರಾಯ. ಅದನ್ನು ಹೊರತುಪಡಿಸಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕುರಿತು ತಿಳಿಸಬೇಕು ಎಂದು ಸೂಚಿಸಿತು. ಅಲ್ಲದೆ, ಸರ್ಕಾರದ ಕ್ರಮದಿಂದ ಅರ್ಜಿದಾರರ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ. ಹೀಗಿರುವಾಗ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಸಂವಿಧಾನ ಪರಿಚ್ಛೇದ 26 ಉಲ್ಲಂಘನೆಯಾಗಲಿದೆಯೇ ಎಂದು ಪ್ರಶ್ನಿಸಿತು. ವಾದ ಮುಂದುವರೆಸಿದ ವಕೀಲರು, ಹಿಂದೂ ಸಂಸ್ಕೃತಿಯಲ್ಲಿ ಮೂರ್ತಿ ಪೂಜೆಗೆ ಪ್ರಾಮುಖ್ಯತೆಯಿದೆ. ಉದ್ಘಾಟನೆಗೆ ಆಹ್ವಾನ ಪಡೆದಿರುವವರಿಗೆ ಸಿಂಧೂರ ಮತ್ತು ಅರಿಶಿನದಲ್ಲಿ ನಂಬಿಕೆ ಇಲ್ಲ ಎಂದು ತಿಳಿಸಿದರು. ಈ ವೇಳೆ ಪೀಠ, ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ತಿಳಿಸಿತು.

ಸರ್ಕಾರದ ಪರ ಎಜಿ ಕೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ ಅರ್ಜಿದಾರಲ್ಲಿ ಒಬ್ಬರಾದ ಪ್ರತಾಪ್ ಸಿಂಹ ಈ ಹಿಂದೆ ಕವಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ಅಂಶವನ್ನು ಅರ್ಜಿಯಲ್ಲಿ ಮರೆ ಮಾಚಿದ್ದಾರೆ. ಇದೀಗ ಮುಸ್ಲಿಂ ಸಮುದಾಯದ ಲೇಖಕಿಯನ್ನು ಆಹ್ವಾನಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದಸರಾ ರಾಜ್ಯ ಸರ್ಕಾರದಿಂದ ನಡೆಸುವ ನಾಡ ಹಬ್ಬವಾಗಿದ್ದು, ಎಲ್ಲ ಧರ್ಮೀಯರು ಭಾಗಿಯಾಗುತ್ತಾರೆ. ಬಾನು ಮುಷ್ತಾಕ್ ಅವರನ್ನು ಹಿಂದೂ ವಿರೋಧಿ ಎಂದು ಹೇಳುವುದಕ್ಕೆ ಅವಕಾಶವಿಲ್ಲ. ಈ ರೀತಿಯ ಹೇಳಿಕೆ ಮನಸ್ಸನ್ನು ಕಳವಳಗೊಳಿಸುತ್ತದೆ. ಇಂತಹ ಮಾತನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ಅರ್ಜಿದಾರರಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು ಎಂದು ಕೋರಿದರು.ಜತೆಗೆ ದೇವಾಲಯಗಳಿಗೆ ಯಾರು ಬೇಕಾದರೂ ಬರಬಹುದು ತಾರತಮ್ಯ ಮಾಡುವಂತಿಲ್ಲ ಎಂದು ಮುಜರಾಯಿ ಇಲಾಖೆ ಸುತ್ತೋಲೆಯಿದೆ ಎಂದರು.