ನ್ಯೂಸ್

ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ನಿಷೇಧ; ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧ ಎಂದ INDIA ಮೈತ್ರಿಕೂಟದ ಸಂಸದರು

ನವದೆಹಲಿ: ಅಸ್ಸಾಂ ಸರ್ಕಾರವು ಹೋಟೆಲ್​ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಿದ್ದು, ಈ ವಿಚಾರವನ್ನು ಖುದ್ದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಘೋಷಿಸಿದ್ಧಾರೆ. ಅಸ್ಸಾಂ ಸರ್ಕಾರದ ಈ ನಿರ್ಧಾರ ಹೊರಬೀಳುತ್ತಿದ್ದಂತೆ ದೇಶದಲ್ಲಿ ರಾಜಕೀಯ ಗದ್ದಲ ಏರ್ಪಟ್ಟಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಈ ಬಗ್ಗೆ ಇಂಡಿಯಾ ಮೈತ್ರಿಕೂಟದ (India Alliance) ಸಂಸದರು ಮಾತನಾಡಿದ್ದಾರೆ.

ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ (Iqra Hasan)​, ಗೋಮಾಂಸ ಮಾರಾಟ ನಿಷೇಧ ಮಾಡುವುದು ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ. ಸರ್ಕಾರವು ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರೆಸಿದರೆ ರಾಷ್ಟ್ರವು ಸರ್ವಾಧಿಕಾರದತ್ತ ಸಾಗುತ್ತದೆ. ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳನ್ನು ಅನುಸರಿಸುವ ಜನರು ನಮ್ಮಲ್ಲಿರುವುದು ದೇಶದ ಸೌಂದರ್ಯ. ಈ ರೀತಿಯ ನಿರ್ಧಾರಗಳು ಸಂವಿಧಾನದ ವಿರುದ್ಧವಾಗಿದೆ.

ಕಾಂಗ್ರೆಸ್​ ಸಂಸದ ಗೌರವ್​ ಗೊಗೋಯ್​ (Gaurav Gogoi) ಮಾತನಾಡಿ, ಜಾರ್ಖಂಡ್​ನಲ್ಲಿ ಬಿಜೆಪಿಯು ಹಿಮಾಂತ ಬಿಸ್ವಾ ಶರ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಸೋಲುಂಡಿದ್ದಾರೆ. ಈ ಸೋಲನ್ನು ಮರೆಮಾಚುವ ಸಲುವಾಗಿ ಅವರು ಈ ರೀತಿಯ ನಿರ್ಧಾರವನ್ನು ಮಾಡಿದ್ದಾರೆ. ಜಾರ್ಖಂಡ್ ಜನರು ದ್ವೇಷದ ರಾಜಕೀಯವನ್ನು ಸೋಲಿಸಿದ ರೀತಿಯಲ್ಲಿ ನಾನು ನಂಬುತ್ತೇನೆ. ಮುಂದಿನ ದಿನಗಳಲ್ಲಿ ಅಸ್ಸಾಂನಲ್ಲೂ ಕೂಡ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್​ ಸಂಸದ ಗೌರವ್​ ಗೊಗೋಯ್ ಹೇಳಿದ್ದಾರೆ. 

ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಶಾಸಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಹಫೀಜ್ ರಫೀಕುಲ್ ಮಾತನಾಡಿ, ಇಸ್ಲಾಂ ಅವರು ಜನರು ಏನು ತಿನ್ನುತ್ತಾರೆ ಅಥವಾ ಧರಿಸುತ್ತಾರೆ ಎಂಬುದನ್ನು ಕ್ಯಾಬಿನೆಟ್ ನಿರ್ಧರಿಸಬಾರದು ಎಂದು ಹೇಳಿದ್ದಾರೆ.