ನ್ಯೂಸ್

ಗಾಂಧಿ ವೇದಿಕೆ ಕಾರ್ಯಕ್ರಮದಲ್ಲಿ ಬ್ಯಾನರ್ ಪೋಟೋ ಗದ್ದಲ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧಿ ಭವನ ಉದ್ಘಾಟನಾ ಕಾರ್ಯಕ್ರಮದ ಬ್ಯಾನರ್ ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಭಾವಚಿತ್ರವನ್ನು ಹಾಕಿಲ್ಲ ಎಂದು ಆರೋಪಿಸಿ ಬೆಂಬಲಿಗರು ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸ್ವಪಕ್ಷೀಯ ಬಹಿರಂಗ ಆಕ್ಷೇಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಮುಖಭಂಗ ಅನುಭವಿಸಬೇಕಾಯಿತು. ಇತರರೊಂದಿಗೆ ಸೇರಿ ಅಸಮಾಧಾನಿತರ ಮನವೊಲಿಸಲು ಪ್ರಯತ್ನಿಸಲಾಯಿತು. ಆದರೂ ಕೂಗಾಟ ಕಡಿಮೆಯಾಗಲಿಲ್ಲ‌.  ಒಂದು ಹಂತದಲ್ಲಿ ಆಕ್ರೋಶದಿಂದ ಕಾರ್ಯಕ್ರಮದ ವೇದಿಕೆ ಬಿಟ್ಟು ತೆರಳಲು ಸಚಿವರು ಮುಂದಾದರು. ಕೊನೆಗೆ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಭಿನ್ನಮತದ ಕೆಟ್ಟ ಸಂದೇಶ ಹೋಗಬಾರದೆಂಬ ಭಾವನೆಯಲ್ಲಿ ಅಲ್ಲಿಯೇ ಕುಳಿತು, ಮೌನಕ್ಕೆ ಶರಣಾದರು.

*ಸಚಿವರು, ಅಧಿಕಾರಿಗಳಿಂದ ಸ್ಪಷ್ಟನೆ*
ಕಾರ್ಯಕ್ರಮದ ಶಿಷ್ಟಾಚಾರದ ಬಗ್ಗೆ ಸ್ವತಃ ಸಚಿವ ಸುಧಾಕರ್, ಜಿಲ್ಲಾಧಿಕಾರಿ ಡಾ ಪಿ.ಎನ್.ರವೀಂದ್ರ ಸ್ಪಷ್ಟನೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ ವತಿಯಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವನ್ನು ಹೊಂದಿದೆ. ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಆಯಾ ಶಾಸಕರ ಭಾವಚಿತ್ರ ಇರುತ್ತದೆ. ಇಲ್ಲಿ ಯಾವುದೇ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ ಎಂದು ಡಿಸಿ ತಿಳಿಸಿದರು‌. ಆಗ ಅಸಮಾಧಾನಿತರು ಸುಮ್ಮನಾದರು‌.

*ಸಚಿವರಿಗೆ ಬೇಸರ ತಂದ ಪ್ರಕರಣ*
ಶಾಸಕರ ಬೆಂಬಲಿಗರ ವರ್ತನೆಯ ಬಗ್ಗೆ ಸ್ವತಃ ಸಚಿವರೇ ಅಸಮಾಧಾನ ವ್ಯಕ್ತಪಡಿಸಿದರು.‌ ಪಕ್ಕದಲ್ಲಿ ಕುಳಿತಿದ್ದ ಶಾಸಕ ಪ್ರದೀಪ್ ಈಶ್ವರ್ ಗೆ ಅನಿರೀಕ್ಷಿತ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಶಾಸಕರು, ಪೊಲೀಸರ ಮೂಲಕ ಬೆಂಬಲಿಗರನ್ನು ಸುಮ್ಮನೆ ಕೂರಲು ಹೇಳಿಸಿದರು.

*ಅಸಲಿಗೆ ನಡೆದಿದ್ದು ಏನು?*
ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನಿರ್ಮಿಸಿದ ಗಾಂಧಿ ಭವನ ಉದ್ಘಾಟನಾ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು. ಇದೇ ವೇಳೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಬ್ಯಾನರ್ ನಲ್ಲಿ ಶಾಸಕರ ಪೋಟೋ ಹಾಕದಿರುವುದನ್ನು ಪ್ರಶ್ನಿಸಿ, ಬಹಿರಂಗ ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಇದರಿಂದ ಕೆಲ ಕಾಲ ಗದ್ದಲ ಉಂಟಾಯಿತು.