ನ್ಯೂಸ್

404ರಿಂದ 26 ರೂಪಾಯಿಗೆ ಕುಸಿದ ಬ್ಯಾಂಕ್​ ಷೇರುಗಳ ಬೆಲೆ: ಬ್ರೋಕರೇಜ್​ ಸಂಸ್ಥೆಗಳು ಹೇಳುವುದೇನು?

ಮುಂಬೈ: ನೀವು ಖಾಸಗಿ ವಲಯದ ಯೆಸ್ ಬ್ಯಾಂಕ್ ಷೇರುಗಳ ಮೇಲೆ ಬಾಜಿ ಕಟ್ಟಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ವಾಸ್ತವವಾಗಿ, ಕೆಲವು ದೊಡ್ಡ ದಲ್ಲಾಳಿಗಳು ಈ ಷೇರನ್ನು ಮಾರಾಟ ಮಾಡಲು ಸಲಹೆ ನೀಡಿದ್ದಾರೆ. ಬ್ಯಾಂಕ್ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ಸಮಯದಲ್ಲಿ ಈ ಸಲಹೆಯನ್ನು ನೀಡಲಾಗಿದೆ. ಆದರೆ, ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್​ನ ಲಾಭ ದ್ವಿಗುಣಗೊಂಡು 452 ಕೋಟಿ ರೂ. ಮುಟ್ಟಿದೆ.

ಬ್ರೋಕರೇಜ್​ ಸಂಸ್ಥೆಗಳಾದ ಜೆಎಂ ಫೈನಾನ್ಶಿಯಲ್ ಮತ್ತು ಕೋಟಕ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್ ಮೌಲ್ಯಮಾಪನಗಳನ್ನು ಉಲ್ಲೇಖಿಸಿ ಯೆಸ್ ಬ್ಯಾಂಕ್ ಷೇರುಗಳಲ್ಲಿ 'ಮಾರಾಟ' ಮಾಡುವಂತೆ ಸಲಹೆ ನೀಡಿವೆ. ಜೆಎಂ ಫೈನಾನ್ಶಿಯಲ್​ ಈ ಷೇರಿನ ಗುರಿ ಬೆಲೆಯನ್ನು 18 ರೂ.ಗೆ ನಿಗದಿಪಡಿಸಿದೆ. ಬ್ಯಾಂಕ್ ಆಸ್ತಿ ಗುಣಮಟ್ಟದಲ್ಲಿ ಸುಧಾರಣೆ ಕಂಡಿದೆ, ಹೆಚ್ಚಿನ ಚೇತರಿಕೆ ಮತ್ತು ಬಲವಾದ ಬೆಳವಣಿಗೆಯಿಂದ ಬೆಂಬಲಿತವಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ. ಮಾರ್ಚ್ ತ್ರೈಮಾಸಿಕ ಫಲಿತಾಂಶದ ನಂತರ ಕೋಟಕ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್ ಈ ಷೇರುಗಳ ಮೇಲೆ 'ಮಾರಾಟ' ಸಲಹೆಯನ್ನು ನೀಡಿದ್ದು, ಗುರಿ ಬೆಲೆಯನ್ನು 19 ರೂ.ಗೆ ನಿಗದಿಪಡಿಸಿದೆ.

ಇದಲ್ಲದೆ, ಯೆಸ್ ಬ್ಯಾಂಕ್‌ನ ಮಾರ್ಚ್ ತ್ರೈಮಾಸಿಕ ಲಾಭವು ನಿರೀಕ್ಷೆಗಳಿಗೆ ಅನುಗುಣವಾಗಿದೆ ಎಂದು ದೇಶೀಯ ಬ್ರೋಕರೇಜ್ ಸಂಸ್ಥೆ ಐಸಿಐಸಿಐ ಸೆಕ್ಯುರಿಟೀಸ್ ಟಿಪ್ಪಣಿಯಲ್ಲಿ ತಿಳಿಸಿದೆ. ಬ್ಯಾಂಕ್ ಸಾಲ ಮತ್ತು ಠೇವಣಿಗಳಲ್ಲಿ ಹೆಚ್ಚಳವಾಗಿದೆ. ಬ್ಯಾಂಕ್‌ನ ಷೇರುಗಳ ಗುರಿ ಬೆಲೆಯನ್ನು ಹಿಂದಿನ ರೂ 17 ರಿಂದ ರೂ 20ಕ್ಕೆ ಐಸಿಐಸಿಐ ಸೆಕ್ಯುರಿಟೀಸ್ ಹೆಚ್ಚಿಸಿದೆ. ಬ್ರೋಕರೇಜ್‌ನ ಹೊಸ ಗುರಿ ಬೆಲೆಯು ಸ್ಟಾಕ್‌ಗೆ 24 ಪ್ರತಿಶತದಷ್ಟು ಸಂಭಾವ್ಯ ಇಳಿಕೆಯನ್ನು ಸೂಚಿಸುತ್ತದೆ.

ಮಂಗಳವಾರ, ಯೆಸ್ ಬ್ಯಾಂಕ್ ಷೇರುಗಳ ಬೆಲೆ ಶೇ. 3.51 ರಷ್ಟು ಕುಸಿದು, ರೂ 26.15 ಕ್ಕೆ ತಲುಪಿದೆ. ಕುಸಿದಿದೆ. ಮಹಾರಾಷ್ಟ್ರ ದಿನವಾದ ಬುಧವಾರದಂದು ಷೇರು ಮಾರುಕಟ್ಟೆಗಳಿಗೆ ರಜೆ ನೀಡಲಾಗಿದೆ. ಯೆಸ್​ ಬ್ಯಾಂಕ್​ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 404 ಮತ್ತು ಕನಿಷ್ಠ ಬೆಲೆ ರೂ. 5.65 ಇದೆ.

ಕಳೆದ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ನಿವ್ವಳ ಲಾಭ ದ್ವಿಗುಣಗೊಂಡು 452 ಕೋಟಿ ರೂ. ತಲುಪಿದೆ. ವಸೂಲಾಗದ ಸಾಲಗಳ ನಿಬಂಧನೆಯಲ್ಲಿನ ಕಡಿತದಿಂದಾಗಿ ಲಾಭವು ಹೆಚ್ಚಿದೆ ಎಂದು ಬ್ಯಾಂಕ್ ಹೇಳಿದೆ. 2022-23ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ 202.43 ಕೋಟಿ ರೂ. ಲಾಭ ದಾಖಲಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಬ್ಯಾಂಕ್ 1,251 ಕೋಟಿ ರೂ.ಗಳ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 74 ರಷ್ಟು ಹೆಚ್ಚಾಗಿದೆ.