ವಡೋದರ: ಗುಜರಾತ್ನ ವಡೋದರದಲ್ಲಿನ ಬ್ಯಾಂಕ್ವೊಂದರಲ್ಲಿ ಕಳವು ಮಾಡಲು ಬಂದ ಕಳ್ಳ, ಆಕಸ್ಮಿಕವಾಗಿ ತನ್ನ ಕತ್ತನ್ನೇ ಕೊಯ್ದುಕೊಂಡು ಮೃತಪಟ್ಟಿದ್ದಾನೆ.
ವಡೋದರದ ಹರ್ನಿ ರಸ್ತೆಯಲ್ಲಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಶಾಖೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ 12.45ರಿಂದ 1 ಗಂಟೆಯ ನಡುವೆ ಕಳ್ಳನೊಬ್ಬ ಬ್ಯಾಂಕ್ ಒಳಗೆ ನುಗ್ಗಿದ್ದ. ಸೇಫ್ಟಿ ವಾಲ್ಟ್ ಅನ್ನು ಕತ್ತರಿಸಲು ಎಲೆಕ್ಟ್ರಿಕ್ ಕಟ್ಟರ್ ಅನ್ನು ತಂದಿದ್ದ. ಸೇಫ್ಟಿ ವಾಲ್ಟ್ ಅನ್ನು ಕತ್ತರಿಸಿದ್ದನಾದರೂ, ಹಣವನ್ನು ಕದಿಯುವ ಮುನ್ನ ಆಕಸ್ಮಿಕವಾಗಿ ಚಾಲನೆಗೊಂಡ ಎಲೆಕ್ಟ್ರಿಕ್ ಕಟ್ಟರ್ ಆತನ ಕತ್ತನ್ನೇ ಕೊಯ್ದಿದೆ ಎಂದು ವಾರಾಸಿಯಾ ಪೊಲೀಸ್ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.
ಕಳ್ಳನ ಚಲನವಲನ ಬ್ಯಾಂಕ್ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಅಲ್ಲದೆ, ಚೆನ್ನೈನಲ್ಲಿರುವ ಬ್ಯಾಂಕ್ನ ವಿಚಕ್ಷಣ ದಳದ ಸಿಬ್ಬಂದಿ ಈತನ ಚಲನವಲನವನ್ನು ನೋಡಿ, ಶಾಖಾ ವ್ಯವಸ್ಥಾಪಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅವರು ಬ್ಯಾಂಕ್ ಇರುವ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕರೆ ಮಾಡಿ, ಶಾಖೆಯನ್ನು ತಲುಪಿ ಒಳ ಹೋಗುವಷ್ಟರಲ್ಲೇ ಕಳ್ಳ ಮೃತಪಟ್ಟಿದ್ದ ಎನ್ನಲಾಗಿದೆ.
ಸೇಫ್ಟಿ ವಾಲ್ಟ್ ಇದ್ದ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ನಿಲ್ಲಬಹುದಾದಷ್ಟು ಸ್ಥಳ ಮಾತ್ರ ಇತ್ತು. ಅಲ್ಲಿ ಕತ್ತಲಿದ್ದುದರಿಂದ ತನ್ನ ಚಲನವಲನದ ಮೇಲೆ ನಿಗಾ ಇಡಲು ಕಳ್ಳನಿಗೆ ಸಾಧ್ಯವಾಗಿಲ್ಲ. ಹಾಗಾಗಿ ಆತ ಆಕಸ್ಮಿಕವಾಗಿ ಕಟ್ಟರ್ನ ವೈರ್ ಅನ್ನು ಎಳೆದಿದ್ದಾನೆ. ಅದು ಚಾಲನೆಗೊಂಡ ಆತನ ಕತ್ತನ್ನೇ ಕೊಯ್ದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಇನ್ಸ್ಪೆಕ್ಟರ್ ಎಸ್.ಎಸ್. ಆನಂದ್ ಹೇಳಿದ್ದಾರೆ.
ಕಳ್ಳನ ಬಳಿ ಒಂದಷ್ಟು ದಾಖಲಾತಿಗಳು ದೊರೆತಿವೆ. ಆತ ಯಾರೆಂಬುದನ್ನು ಗುರುತಿಸಲು ಆತನ ಕುಟುಂಬದವರ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಸದ್ಯ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.