ನ್ಯೂಸ್

ಬ್ಯಾಂಕ್​ಗಳ ಸಾಲ ನೀಡಿಕೆ ಪ್ರಮಾಣ ತೀವ್ರ ಕುಸಿತ

ಮುಂಬೈ: ಬ್ಯಾಂಕ್​ಗಳ ಸಾಲ ನೀಡಿಕೆ ಪ್ರಮಾಣ ತೀವ್ರವಾಗಿ ಕುಸಿದಿದೆ ಎಂದು ಆರ್​ಬಿಐ ಹೇಳಿದೆ. ಕಳೆದ ವರ್ಷ ಜನವರಿಯಲ್ಲಿ ಶೇ. 13.5ರಷ್ಟಿದ್ದ ಸಾಲ ನೀಡಿಕೆ ಈ ವರ್ಷ ಶೇ. 8.5ಕ್ಕೆ ಕುಸಿದಿದೆ ಎಂದು ಆರ್​ಬಿಐ ಅಂಕಿಸಂಖ್ಯೆ ತಿಳಿಸಿದೆ.

ಸೇವಾ ಕ್ಷೇತ್ರಕ್ಕೆ ನೀಡುವ ಸಾಲದಲ್ಲಿ ತೀವ್ರ ಕುಸಿತವಾಗಿರುವುದೇ ಈ ವಿದ್ಯಮಾನಕ್ಕೆ ಕಾರಣ ಎಂದು ಆರ್​ಬಿಐ ಅಭಿಪ್ರಾಯಪಟ್ಟಿದೆ. ಸೇವಾ ಕ್ಷೇತ್ರದ 2019ರ ಜನವರಿಯಲ್ಲಿ ಶೇ. 23.9 ಇದ್ದದ್ದು ಸಾಲ ವಿತರಣೆ, ಈ ವರ್ಷದ ಜನವರಿಯಲ್ಲಿ ಶೇ.8.9ಕ್ಕೆ ಇಳಿಕೆಯಾಗಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್​ಬಿಎಫ್​ಸಿ) ಬ್ಯಾಂಕ್​ಗಳು ನೀಡುವ ಸಾಲದ ಬೆಳವಣಿಗೆ ಪ್ರಮಾಣ 2019ರ ಆದಿಯಲ್ಲಿ ಶೇ. 48.3ರಿಂದ ಶೇ. 32.2ಕ್ಕೆ ಬಂದು ನಿಂತಿದೆ. ವೈಯಕ್ತಿಕ ಸಾಲ ವಿಭಾಗದಲ್ಲಿ ಮಾತ್ರ ಶೇ. 16.9ರಷ್ಟು ಬೆಳವಣಿಗೆ ದಾಖಲಾಗಿದೆ. ವೈಯಕ್ತಿಕ ಸಾಲದಲ್ಲೂ ಗೃಹಸಾಲ ಶೇ. 17.5ರಿಂದ ಶೇ. 18.4ಕ್ಕೆ ಏರಿದೆ.

ಋಣಾತ್ಮಕ ಶಿಕ್ಷಣ ಸಾಲ: ಶಿಕ್ಷಣ ಸಾಲದಲ್ಲಿ ಶೇ. 3.1ರ ಋಣಾತ್ಮಕ ಬೆಳವಣಿಗೆ ದಾಖಲಾಗಿದೆ. ಕಳೆದ ವರ್ಷ ಜನವರಿಯಲ್ಲಿ ಇದು ಶೇ.2.3 ಋಣಾತ್ಮಕವಾಗಿತ್ತು ಎಂದು ಆರ್​ಬಿಐ ಅಂಕಿಅಂಶ ವಿವರಿಸಿದೆ.