ನ್ಯೂಸ್

ಆನ್‌ಲೈನ್ ಟ್ರೇಡಿಂಗ್ ಚಟಕ್ಕೆ ಬಿದ್ದಿದ್ದ ಬ್ಯಾಂಕ್ ಉದ್ಯೋಗಿ: ಪತ್ರ ಬರೆದಿಟ್ಟು ನಾಪತ್ತೆ

ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್ ಚಟಕ್ಕೆ ಬಿದ್ದಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ೨೦ ಲಕ್ಷ ಕಳೆದುಕೊಂಡು ಸಾಲ ತೀರಿಸಲಾಗದೇ ಮನೆಬಿಟ್ಟು ಹೋಗಿದ್ದಾರೆ. ಈ ಸಂಬಂಧ ಅನ್ನಪೂಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದಿನಪಾಳ್ಯದಲ್ಲಿ ನಿವಾಸಿ ಭರತ್(೩೨)ನಾಪತ್ತೆಯಾದವರು. ಆನ್‌ಲೈನ್ ಟ್ರೇಡಿಂಗ್ ಚಟಕ್ಕೆ ಬಿದಿದ್ದ ಭರತ್ ಬ್ಯಾಂಕ್ ಸೇರಿ ಇತರ ಕಡೆ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇಎಮ್ಐ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಪುಸ್ತಕದಲ್ಲಿ ಬರೆದಿಟ್ಟು ಬೈಕ್‌ನಲ್ಲಿ ನಾಪತ್ತೆಯಾಗಿದ್ದಾರೆ. ಇತ್ತ ಭರತ್‌ಗಾಗಿ ಆತನ ಪತ್ನಿ ಎಲ್ಲ ಕಡೆ ಹುಡುಕಾಟ ನಡೆಸಿ ಆತ ಸಿಗದೆ ಇದ್ದಾಗ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಭರತ್ ಪತ್ನಿ ಚೈತ್ರ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಪತಿ ಭರತ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ೨ ದಿನಗಳಿಂದ ಮನೆಗೆ ಬಾರದೇ ೆನ್ ಸಂಪರ್ಕದಲ್ಲಿದ್ದರು. ಅ.೯ ರಂದು ಬೆಳಗ್ಗೆ ೭ ಗಂಟೆಯಲ್ಲಿ ಕಾರ್ ಪಾರ್ಕಿಂಗ್ ಜಾಗದಲ್ಲಿ ಬಂದಾಗ ಒಂದು ಪುಸ್ತಕ ಸಿಕ್ಕಿದ್ದು ಅದರಲ್ಲಿ ನನ್ನ ಸಾಲ ಹೆಚ್ಚಾಗಿದೆ. ಇಎಂಐ ಕಮಿಟ್ಮೆಂಟ್ಸ್ ಎಲ್ಲಾ ಕಟ್ಟಲು ಸಾಧ್ಯವಾಗುತ್ತಿಲ್ಲ. ನಾನು ಜೀವನದಲ್ಲಿ ಸೋತಿದ್ದೇನೆ ಎಂದು ಬರೆದಿರುವುದು ಕಂಡು ಬಂದಿದ್ದು, ನಾಪತ್ತೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಪೊಲೀಸರಿಗೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಭರತ್ ಕೆಂಗುಂಟ್ಟೆ ಸರ್ಕಲ್ ಬಳಿ ಬಂದಿರುವುದರ ಬಗ್ಗೆ ಸುಳಿವು ಸಿಕ್ಕಿದ್ದು ಅಲ್ಲಿಂದ ಮುಂದೆ ಎಲ್ಲಿ ಹೋಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೈಸೂರು, ತುಮಕೂರು, ದೊಡ್ಡಬಳ್ಳಾಪುರ ಭಾಗದಲ್ಲಿ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.