ನ್ಯೂಸ್

ಕಣ್ಣಾಮುಚ್ಚಾಲೆ ಆಡುವಾಗ ಕಂಟೇನರ್​ ಶಿಪ್​ನೊಳಗೆ ಲಾಕ್​ ಆದ ಬಾಲಕ ಮಲೇಷ್ಯಾ ತಲುಪಿದ್ದ!

ನವದೆಹಲಿ: ಹೀಗೆ ಒಮ್ಮೆ ಊಹಿಸಿಕೊಳ್ಳಿ. ಕಣ್ಣಾಮುಚ್ಚಾಲೆ ಆಡುತ್ತಿರುವಾಗ, ನೀವು ಕಂಟೇನರ್​ ಒಳಗೆ ಅಡಗಿಕೊಳ್ಳುತ್ತೀರಿ. ನೀವು ಅಲ್ಲೇ ನಿದ್ದೆ ಹೋಗಿ ಎದ್ದಾಗ ಹೊಸ ದೇಶದಲ್ಲಿ ಹೊರ ಬರುತ್ತೀರಿ. ಪಕ್ಕಾ ಸಿನಿಮಾದ ಕಥೆ ಅಂತ ಅನಿಸುತ್ತಿದೆಯಾ? ಆದರೆ ಇದು ನಿಜ ಜೀವನದಲ್ಲಿ ನಡೆದಿರುವ ಕಥೆ. ಈ ರೀತಿಯ ವಿಲಕ್ಷಣ ಘಟನೆ ನಡೆದದ್ದು 15 ವರ್ಷದ ಬಾಂಗ್ಲಾದೇಶದ ಹುಡುಗನೊಂದಿಗೆ.

ಮಾನವ ಕಳ್ಳಸಾಗಣೆಯಾ?
ಜನವರಿ 17ರಂದು, ಬಾಂಗ್ಲಾದೇಶ ಮೂಲದ ಹಡಗಿನಿಂದ ಕಂಟೈನರ್‌ಗಳನ್ನು ಇಳಿಸುತ್ತಿದ್ದಾಗ, ಮಲೇಷ್ಯಾದ ಪೋರ್ಟ್ ಕ್ಲಾಂಗ್ ಸಿಬ್ಬಂದಿ ಕಂಟೇನರ್‌ ಒಂದರಿಂದ ಗೊಂದಲಕ್ಕೊಳಗಾದ ಮತ್ತು ಸಣಕಲು ಹುಡುಗ ಹೊರಬಂದದ್ದನ್ನು ನೋಡಿ ಆಘಾತಕ್ಕೊಳಗಾದರು. ಹುಡುಗನಿಗೆ ಯಾವುದೇ ಸ್ಥಳೀಯ ಭಾಷೆ ಬರುತ್ತಿಲ್ಲ. ಮಾತನಾದ್ದು ಅರ್ಥವೂ ಆಗಲಿಲ್ಲ. ಆದ್ದರಿಂದ ಅವನೊಂದಿಗೆ ಸಂವಹನ ಮಾಡುವುದು ದೊಡ್ಡ ಸವಾಲಾಗಿತ್ತು.

ಈತ ಮಾನವ ಕಳ್ಳಸಾಗಣೆಯ ಬಲಿಪಶು ಎಂದು ಶಂಕಿಸಿದ ಅಧಿಕಾರಿಗಳು, ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಕಡೆಗೆ ವಿಚಾರಣೆ ನಡೆಸಿದಾಗ ಇದು ಮಾನವ ಕಳ್ಳಸಾಗಣೆ ಅಥವಾ ಯಾವುದೇ ಅಪರಾಧದ ಪ್ರಕರಣವಲ್ಲ ಎಂದು ಬಯಲಾಯಿತು.

ಅವನ ತಪ್ಪು ನಿದ್ರೆಗೆ ಜಾರಿದ್ದು!
15 ವರ್ಷದ ಫಾಹಿಮ್, ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಈ ಮಧ್ಯೆ, ಆತ ಅಡಗಿಕೊಳ್ಳಲು ಶಿಪ್ಪಿಂಗ್ ಕಂಟೇನರ್ ಅನ್ನು ಆರಿಸಿಕೊಂಡಿದ್ದಾನೆ. ಈ ಸಂದರ್ಭ ಆತ ಆಕಸ್ಮಿಕವಾಗಿ ನಿದ್ದೆ ಹೋಗಿದ್ದಾನೆ. ಈ ಬಾಲಕ ಕಂಟೇನರ್​ ಒಳಗಡೆ ಇರುವ ವಿಚಾರ ತಿಳಿಯದ ಸಿಬ್ಬಂದಿ, ಬಾಗಿಲನ್ನು ಲಾಕ್​ ಮಾಡಿ ಅದನ್ನು ಕಂಟೇನರ್​ಗೆ ತುಂಬಿಸಿದ್ದಾರೆ.

ಹಡಗು ಜನವರಿ 11 ರಂದು ಚಿತ್ತಗಾಂಗ್ ಬಂದರಿನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಜನವರಿ 17 ರಂದು ಮಲೇಷ್ಯಾದ ಪೋರ್ಟ್ ಕ್ಲಾಂಗ್ ತಲುಪಿದೆ. ಈ ಸಂದರ್ಭ ಅನ್ನ ನೀರು, ಇದ್ಯಾವುದೂ ಇಲ್ಲದೇ ಈ ಬಾಲಕ ಆರು ದಿನಗಳ ಕಾಲ ಕತ್ತಲೆ ತುಂಬಿದ್ದ ಕಂಟೇನರ್​ ಒಳಗಡೆ ಕಾಲ ಕಳೆದಿದ್ದಾನೆ.

ಬರೋಬ್ಬರಿ 6 ದಿನಗಳ ಕಾಲ ಕಂಟೇನರ್‌ನೊಳಗೆ ಹುಡುಗ ಲಾಕ್ ಆಗಿದ್ದ. ಈ ಸಂದರ್ಭ ಕಂಟೇನರ್‌ನೊಳಗಿಂದ ಸಹಾಯಕ್ಕಾಗಿ ಕಿರುಚಿದ್ದಾನೆ. ಆದರೆ ಈತನ ಕೂಗು ಯಾರಿಗೂ ಕೇಳಿಸಲಿಲ್ಲ. ಹೀಗಾಗಿ 6 ದಿನಗಳ ಕಾಲ ಅನ್ನ-ನೀರು ಇಲ್ಲದೆ ಈತ ಹೇಗೆ ಬದುಕಿದ್ದ ಎಂಬುದು ಎಲ್ಲರಿಗೂ ನಿಗೂಢವಾಗಿದೆ.

ಪೋರ್ಟ್ ಕ್ಲಾಂಗ್‌ನಲ್ಲಿ ಕೆಲಸಗಾರರು ಚಿತ್ರೀಕರಿಸಿದ ಫೋಟೋಗಳು ಮತ್ತು ಕ್ಲಿಪ್‌ಗಳು ಹುಡುಗನು ಶಿಪ್ಪಿಂಗ್ ಕಂಟೈನರ್‌ನಿಂದ ಹೊರಬರುತ್ತಿರುವಾಗ ಪರಿಚಯವಿಲ್ಲದ ಸುತ್ತಮುತ್ತಲಿನ ಗೊಂದಲದಿಂದ ನೋಡುತ್ತಿರುವುದನ್ನು ತೋರಿಸುತ್ತವೆ. ನಂತರ ಅವನನ್ನು ಆಂಬ್ಯುಲೆನ್ಸ್ ಮೂಲಕ ಎತ್ತಿಕೊಂಡು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚೇತರಿಸಿಕೊಂಡ ನಂತರ ಆತನನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. (ಏಜೆನ್ಸೀಸ್)