ನ್ಯೂಸ್

ಬಾಂಗ್ಲಾದೇಶ ಹೊಸ ನೋಟುಗಳಲ್ಲಿ ಮಹತ್ವದ ಬದಲಾವಣೆ! ಮುಜೀಬ್ ಚಿತ್ರ ತೆಗೆದು ಹಿಂದೂ ದೇವಾಲಯ ಫೋಟೋ | Bangladesh

ಮೋಹನ್​ ಶೆಟ್ಟಿ

Bangladesh Banknotes: ಬಾಂಗ್ಲಾದೇಶದ ಹೊಸ ಕರೆನ್ಸಿ ನೋಟುಗಳು ಇದೀಗ ಅಧಿಕೃತವಾಗಿ ಹೊರಬಿದ್ದಿದ್ದು, ಅವುಗಳಲ್ಲಿ ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಇಲ್ಲಿಯವರೆಗೆ, ಆ ದೇಶದ ಕರೆನ್ಸಿ ನೋಟುಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್​ ರೆಹಮಾನ್​ ಅವರ ಚಿತ್ರವಿತ್ತು. ಆದ್ರೆ, ಈಗಿನ ಹೊಸ ನೋಟುಗಳಲ್ಲಿ ಮುಜಿಬ್ ಅವರ ಫೋಟೋ ಬದಲಿಗೆ ಹಿಂದೂ ಮತ್ತು ಬೌದ್ಧ ದೇವಾಲಯಗಳ ಚಿತ್ರಗಳನ್ನು ಹಾಕಲಾಗಿದೆ.

ಜೂನ್ 1ರಂದು ಬಾಂಗ್ಲಾ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕರೆನ್ಸಿ ನೋಟುಗಳಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರ ಲಭ್ಯವಿಲ್ಲ. ಈ ಹಿಂದೆ ದೇಶದ ಎಲ್ಲ ನೋಟುಗಳಲ್ಲಿಯೂ ಮುಜಿಬುರ್ ರೆಹಮಾನ್ ಫೋಟೋವಿತ್ತು. ಆದರೆ, ಶೇಖ್ ಹಸೀನಾ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಕಾರಣ, ಇದೀಗ ಯೂನಸ್​ ನೇತೃತ್ವದ ಮಧ್ಯಂತರ ಸರ್ಕಾರ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ.

ಬಾಂಗ್ಲಾದೇಶ ಬ್ಯಾಂಕ್ ವಕ್ತಾರ ಆರಿಫ್ ಹುಸೇನ್ ಖಾನ್ ಮಾತನಾಡಿ, "ಹೊಸ ನೋಟುಗಳ ಸರಣಿ ಮತ್ತು ಅದರಲ್ಲಿನ ವಿನ್ಯಾಸ ವ್ಯಕ್ತಿಗಳ ಭಾವಚಿತ್ರಗಳನ್ನು ಒಳಗೊಂಡಿರುವುದಿಲ್ಲ. ಅದರ ಬದಲಿಗೆ ನೈಸರ್ಗಿಕ ಭೂದೃಶ್ಯಗಳು ಮತ್ತು ಸಾಂಪ್ರದಾಯಿಕ ಮತ್ತು ಸಂಸ್ಕೃತಿಯ ಹೆಗ್ಗುರುತುಗಳನ್ನು ಮಾತ್ರ ಒಳಗೊಂಡಿರುತ್ತವೆ" ಎಂದು ಕಾರಣ ತಿಳಿಸಿದ್ದಾರೆ. ವರದಿಯ ಪ್ರಕಾರ, ಈ ಕರೆನ್ಸಿ ನೋಟುಗಳಲ್ಲಿ ಹಿಂದೂ ಮತ್ತು ಬೌದ್ಧ ದೇವಾಲಯಗಳ ಚಿತ್ರಗಳಿವೆ.

ದಿವಂಗತ ಜೈನುಲ್ ಅಬೇದಿನ್ ಅವರ ಕಲಾಕೃತಿ ಮತ್ತು 1971ರ ವಿಮೋಚನಾ ಯುದ್ಧದಲ್ಲಿ ಮಡಿದವರನ್ನು ಗೌರವಿಸುವ ರಾಷ್ಟ್ರೀಯ ಹುತಾತ್ಮರ ಸ್ಮಾರಕವನ್ನು ಒಳಗೊಂಡಿವೆ. ಬಾಂಗ್ಲಾದೇಶ ಬ್ಯಾಂಕ್ ಮೂರು ವಿಭಿನ್ನ ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿದೆ.

ಬದಲಾವಣೆ ಇದೇ ಮೊದಲಲ್ಲ!

ಬಾಂಗ್ಲಾದೇಶವು ತನ್ನ ಕರೆನ್ಸಿಯಲ್ಲಿ ತಂದ ಬದಲಾವಣೆ ಇದೇ ಮೊದಲೇನಲ್ಲ. 1972ರಲ್ಲಿ, ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದ ನಂತರ, ದೇಶವು ತನ್ನ ಕರೆನ್ಸಿಯನ್ನು ಬದಲಾಯಿಸಿತ್ತು. ಈ ನೋಟುಗಳು ಹೊಸದಾಗಿ ರೂಪುಗೊಂಡ ದೇಶದ ನಕ್ಷೆಯನ್ನು ಒಳಗೊಂಡಿತ್ತು. ತದನಂತರ, ಹೊಸ ಮುಖಬೆಲೆಯ ನೋಟುಗಳು ಅವಾಮಿ ಲೀಗ್ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರ ಫೋಟೋವನ್ನು ಒಳಗೊಂಡಿತ್ತು. ಆದ್ರೆ, ಇತ್ತೀಚಿನ ರಾಜಕೀಯ ಬಿಕ್ಕಟ್ಟು, ಶೇಖ್ ಹಸೀನಾ ಪಲಾಯನ ಇದಕ್ಕೆಲ್ಲ ಕಾರಣ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).