ಶಿವಮೊಗ್ಗ: ಬಾಂಗ್ಲಾದಲ್ಲಿರುವ ನಿರ್ಗತಿಕರಿಗೆ ಅನ್ನ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡಿದ ಇಸ್ಕಾನ್‌ನ ಸಂತ ಚಿನ್ಮಯಾನಂದರನ್ನೇ ಜೈಲಿಗೆ ಹಾಕುವ ಮೂಲಕ ಬಾಂಗ್ಲಾ ಧೋಖಾ ಮಾಡಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಬಾಂಗ್ಲಾದಲ್ಲಿ ಹಿಂದುಗಳ ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಧರ್ಮಾಂಧ ಸಂಘಟನೆ ಎಂದು ಅಲ್ಲಿನ ಸರ್ಕಾರ ಕರೆದಿರುವುದು ವಿಪರ್ಯಾಸ ಎಂದು ಹೇಳಿದರು.
ಅಲ್ಲಿ ಹಿಂದುಗಳ ಮೇಲೆ ದಾಳಿ ನಡೆದಂತೆ ಇಲ್ಲಿ ಅಲ್ಪಸಂಖ್ಯಾತ ಮುಸಲ್ಮಾರ ಮೇಲೆ ದಾಳಿ ನಡೆಸಿದರೆ ಪರಿಸ್ಥಿತಿ ಏನಾಗಬಹುದು? ಪಾಕಿಸ್ತಾನ ಹಾಗೂ ಬಾಂಗ್ಲಾದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗೆಯೇ ಆದರೆ ಮುಂದೊಂದು ದಿನ ಬಾಂಗ್ಲಾ ಭಾರತದ ಭಾಗವಾದರೂ ಆಚ್ಚರಿಯಿಲ್ಲ ಎಂದು ತಿಳಿಸಿದರು.
ಪಾಕ್ ಹಾದಿಯಲ್ಲಿ ಬಾಂಗ್ಲಾ!:ಬಾಂಗ್ಲಾ ಪೂರ್ವದಲ್ಲಿ ಭಾರತದ ಭಾಗವೇ ಆಗಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ ಎಲ್ಲ ದೇಶಗಳಿಗೂ ಭಾರತವೇ ತಾಯಿ. ಆದರೆ ಇಂದು ಭಾರತದ ಸುತ್ತಲಿನ ಎಲ್ಲ ದೇಶಗಳೂ ಒಂದಿಲ್ಲೊಂದು ತಾಪತ್ರಯ ಎದುರಿಸುತ್ತಿದೆ ಎಂದು ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ತಿಳಿಸಿದರು.
ಪಾಕಿಸ್ತಾನದ ಹಾದಿಯಲ್ಲೇ ಬಾಂಗ್ಲಾ ಸಾಗುತ್ತಿದೆ. ಭಾರತ ಮಾತೆಯ ಹೊಟ್ಟೆಯಲ್ಲಿ ಹುಟ್ಟಿದರೂ ಆ ದೇಶಗಳಿಗೆ ಸಹಬಾಳ್ವೆಯ ಗುಣ ಬರಲಿಲ್ಲ ಎಂಬುದೇ ಬೇಸರದ ಸಂಗತಿ. ಧರ್ಮದ ಆಧಾರದಲ್ಲೇ ದೇಶ ಕಟ್ಟುತ್ತೇವೆಂಬ ಅತಿರೇಕದ ಮನಸ್ಥಿತಿಯಿರುವ ಅಲ್ಲಿನ ಜನರಿಂದ ಹಿಂದುಗಳ ರಕ್ಷಣೆ ಬಯಸುವುದು ನಿರರ್ಥಕ. ಭಾರತದಿಂದಲೇ ಹೊಸ ದೇಶವಾಗಿ ರೂಪು ತಾಳಿದ ಬಾಂಗ್ಲಾ ಇಂದು ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ ಎಂದರು.