ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸೋಮವಾರ(ಆಗಸ್ಟ್ 5) ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದಾರೆ ಎಂದು ಸೇನಾ ಮುಖ್ಯಸ್ಥ ವಾಕರ್ ಉಜ್ ಝಮಾನ್ ದೃಢಪಡಿಸಿದರು. 48 ಗಂಟೆಗಳಲ್ಲಿ ದೇಶದಲ್ಲಿ ಮಧ್ಯಂತರ ಸರ್ಕಾರ ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ದೇಶದಲ್ಲಿ ಶಾಂತಿಯನ್ನು ಮರಳಿ ತರುತ್ತೇವೆ. ಹಿಂಸಾಚಾರವನ್ನು ನಿಲ್ಲಿಸುವಂತೆ ನಾಗರಿಕರನ್ನು ವಿನಂತಿಸುತ್ತೇವೆ. ದೇಶವು ಬಹಳಷ್ಟು ಅನುಭವಿಸಿದೆ, ಆರ್ಥಿಕತೆಗೆ ಹೊಡೆತ ಬಿದ್ದಿದೆ, ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಇದು ಹಿಂಸಾಚಾರವನ್ನು ನಿಲ್ಲಿಸುವ ಸಮಯ ಎಂದು ಹೇಳಿದರು.
ಸೇನಾ ಮುಖ್ಯಸ್ಥರೇ ಉಸ್ತುವಾರಿ ಸರ್ಕಾರದ ಮುಖ್ಯಸ್ಥರಾಗುತ್ತಾರೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಮತ್ತು ಶೇಖ್ ಹಸೀನಾ ಅವರು ಢಾಕಾ ತೊರೆದಿರುವ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ಹಸೀನಾ ಅವರು 2009ರಿಂದ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಕಳೆದ ತಿಂಗಳಿನಿಂದ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಂದೋಲನವು ಸಾಕಷ್ಟು ಹಿಂಸಾತ್ಮಕ ರೂಪ ಪಡೆದುಕೊಂಡಿತು.
1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೀಡಿರುವ ಶೇ.30ರಷ್ಟು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಸರ್ಕಾರದ ವಿರುದ್ಧ ಜುಲೈನಲ್ಲಿ ಈ ಪ್ರತಿಭಟನೆ ಆರಂಭವಾಯಿತು.(ಏಜೆನ್ಸೀಸ್)