ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಸಾಗರದ ಅಂಬೇಡ್ಕರ್ ವೃತ್ತದಲ್ಲಿ ಹಿಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ರವೀಶ್, ಪ್ರವೀಣ್, ಪ್ರತಿಮಾ ಜೋಗಿ, ಸಂತೋಷ್ ಶೇಟ್ ಇತರರಿದ್ದರು.  
ನ್ಯೂಸ್

ಹಿಂದುಗಳು ಸಂಘಟಿತರಾಗಲು ಸಂಕಲ್ಪ ಮಾಡಿ

ಸಾಗರ: ನಮ್ಮ ಸಂಸ್ಕೃತಿ, ಧರ್ಮ, ನಮ್ಮತನ ಉಳಿಸಿಕೊಳ್ಳಲು ನಾವು ಸಂಘಟಿತರಾಗದಿದ್ದರೆ ಭವಿಷ್ಯದಲ್ಲಿ ಹಿಂದು ಸಮಾಜ ಸಂಕಷ್ಟ ಎದುರಿಸಬೇಕಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬದುಕು ನಡೆಸುವುದೇ ಕಷ್ಟ ಎಂದು ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಹೇಳಿದರು.
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಹಿಂದು ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮಿತಿಮೀರಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ನಿಮ್ಮ ಮನೆಗೂ ನುಗ್ಗಿ ದೌರ್ಜನ್ಯ ಎಸಗುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಹಿಂದು ಸಮಾಜ ಸಂಘಟಿತವಾಗಿ ಜನಾಂದೋಲನ ಕೈಗೊಳ್ಳುವ ಸಂಕೀರ್ಣ ಕಾಲಘಟ್ಟ ಇದಾಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯವನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಸಣ್ಣ ಸಮಸ್ಯೆಯಾದರೂ ಆರ್ಥಿಕ ದಿಗ್ಬಂಧನದ ಮಾತನಾಡುವ ವಿಶ್ವಸಂಸ್ಥೆ ಬಾಂಗ್ಲಾದಲ್ಲಿ ನಡೆಯುತ್ತಿರುವ ನರಮೇಧ ನೋಡಿಯೂ ನೋಡದಂತೆ ಮೌನವಾಗಿದೆ. ಸಣ್ಣಪುಟ್ಟ ವಿಷಯಕ್ಕೂ ಮೂಗು ತೂರಿಸುವ ಕೆಲವು ಸ್ವಯಂಘೋಷಿತ ರಾಷ್ಟ್ರಗಳು ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ವಾಸ್ತವವನ್ನು ಮಾತನಾಡಿದರೆ ಕೆಲವು ಸ್ವಯಂಘೋಷಿತ ಜಾತ್ಯತೀತವಾದಿಗಳು ಆರ್‌ಎಸ್‌ಎಸ್ ಅನ್ನು ಕೋಮುವಾದಿ ಎಂದು ದೂರುತ್ತಾರೆ. ಆದರೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಇಂತಹ ದೌರ್ಜನ್ಯದ ವಿರುದ್ಧ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ವಕೀಲ ರವೀಶ್, ಕೆ.ವಿ.ಪ್ರವೀಣ್, ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಪ್ರಮುಖರಾದ ಸಂತೋಷ್ ಶೇಟ್, ಮಧುರಾ ಶಿವಾನಂದ್, ಸವಿತಾ ವಾಸು, ಮೈತ್ರಿ ಪಟೇಲ್, ಐ.ವಿ.ಹೆಗಡೆ, ರಾಘವೇಂದ್ರ ಕೋಮಲ್, ಶಿವಶಂಕರ್, ಪ್ರೇಮಾ ಕಿರಣ್ ಸಿಂಗ್ ಇತರರಿದ್ದರು.