ಮಾಜಿ ಸಿಎಂ ಬಂಗಾರಪ್ಪ ಜನ್ಮದಿನಾಚರಣೆ ಅಂಗವಾಗಿ ಸೊರಬದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ಎಸ್.ಮಧು ಬಂಗಾರಪ್ಪ, ಸಂತೋಷ್ ಲಾಡ್, ಭೀಮಣ್ಣ ನಾಯಕ್, ಜಿ.ಪಲ್ಲವಿ, ಬಲ್ಕಿಷ್ ಬಾನು, ಆರ್.ಎಂ.ಮಂಜುನಾಥ ಗೌಡ ಇತರರಿದ್ದರು. 
ನ್ಯೂಸ್

ಬಂಗಾರಪ್ಪ ಶೋಷಿತ ಜನರ ದನಿ

ಸೊರಬ: ಬಂಗಾರಪ್ಪ ಅವರು ನನಗೆ ರಾಜಕೀಯ ಭವಿಷ್ಯವನ್ನು ನೀಡಿದ್ದರು. ಅವರ ಕೃಪೆಯಿಂದ ನಾನು ಹಲವು ಬಾರಿ ಸಂಸದನಾಗಿ ಆಯ್ಕೆಯಾಗಲು ಸಹಕಾರಿಯಾಯಿತು. ಅವರಲ್ಲಿರುವ ರಾಜಕೀಯ ಚಿಂತನೆ, ಆಡಳಿತ ವೈಖರಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಪಟ್ಟಣದ ರಂಗಮಂದಿರದ ಎದುರು ಭಾನುವಾರ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ವರ್ಷದ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಬೋರ್ಡ್‌ನಲ್ಲಿ ಇದ್ದ ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ತಂದು ಸಂಸದ, ಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಶೋಷಿತ ವರ್ಗಗಳಿಗೆ ಧ್ವನಿಯಾಗಿದ್ದರು. ಬಂಗಾರಪ್ಪ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿ ಇತ್ತು. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರ ಎಂದರು.

ಸಚಿವ ಮಧು ಬಂಗಾರಪ್ಪ ಸಹ ತಂದೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ. ತಂದೆ -ತಾಯಿಯನ್ನು ಬಂಗಾರಧಾಮದಲ್ಲಿ ದೇವರ ರೂಪದಲ್ಲಿ ಮಾದರಿಯಾಗಿ ತೋರಿಸಿದ್ದಾರೆ. ಈ ಕುಟುಂಬದೊಂದಿಗೆ ಯಾವಾಗಲೂ ಜತೆಗಿರುತ್ತೇನೆ ಎಂದು ಹೇಳಿದರು.

ಸಿಗಬೇಕು ಹೆಚ್ಚಿನ ಮೀಸಲಾತಿ: ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ತಾಲೂಕಿನ ಜನತೆ ಪಾತ್ರ ದೊಡ್ಡದು. ಇಂದಿಗೂ ಅವರ ಚಿಂತನೆಗಳು ಜನಮಾನಸದಲ್ಲಿ ಉಳಿಯಲು ಬಡವರು, ದೀನ-ದಲಿತರು, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ ವಿಚಾರಗಳೇ ಕಾರಣ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ಇವತ್ತಿನ ರಾಜಕಾರಣದಲ್ಲಿ ಇಂತಹ ಹೋರಾಟಗಾರರ ಚಿಂತನೆ ಅಗತ್ಯ. ಬಂಗಾರಪ್ಪ ಅವರ ಕನಸು ನನಸಾಗಲೂ ಹಿಂದುಳಿದ ವರ್ಗಗಳಿಗೆ ಹೆಚ್ಚು ಮೀಸಲಾತಿ ದೊರಕಬೇಕು. ಮನುಷ್ಯ ಶಾಶ್ವತವಲ್ಲ ಚಿಂತನೆಗಳು ಶಾಶ್ವತ ಎಂದರು.

ನಾಲ್ವರಿಗೆ ಪುರಸ್ಕಾರ: ಸಾಹಿತಿ ಡಾ. ಕಾಳೇಗೌಡ ನಾಗವಾರ ಅವರಿಗೆ ಸಾಹಿತ್ಯ ಬಂಗಾರ, ಬೆಳಗಾವಿಯ ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್ ಅವರಿಗೆ ಜಾನಪದ ಬಂಗಾರ, ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ ಅವರಿಗೆ ಕಲಾ ಬಂಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆಯ ಪರವಾಗಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಲ್.ರೇವಣಸಿದ್ದಯ್ಯ ಅವರು ಧರ್ಮ ಬಂಗಾರ ಪ್ರಶಸ್ತಿ ಸ್ವೀಕರಿಸಿದರು.

ಎಸ್.ಬಂಗಾರಪ್ಪ ಫೌಂಡೇಶನ್ ಅಧ್ಯಕ್ಷ, ಸಚಿವ ಎಸ್.ಮಧು ಬಂಗಾರಪ್ಪ, ಶಿರಸಿ ಶಾಸಕ ಭೀಮಣ್ಣ ನಾಯಕ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಸಂಸದ ಆಯನೂರು ಮಂಜುನಾಥ್, ಎಂಎಲ್‌ಸಿ ಬಲ್ಕಿಷ್ ಬಾನು, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ ಆರ್. ಭಂಡಿ ಇತರರಿದ್ದರು.