ನ್ಯೂಸ್

'ಸ್ಪುಟ್ನಿಕ್ ವಿ' ಕರೊನಾ ಲಸಿಕೆ ತಯಾರಿಸಲಿರುವ ಬೆಂಗಳೂರಿನ ಸ್ಟೆಲಿಸ್ ಬಯೋಫಾರ್ಮಾ

ಬೆಂಗಳೂರು : ಭಾರತದಲ್ಲಿ ತುರ್ತು ಬಳಕೆ ಅನುಮತಿಗಾಗಿ ಕಾಯುತ್ತಿರುವ ರಷ್ಯಾದ ಸ್ಪುಟ್ನಿಕ್ ವಿ ಕರೊನಾ ಲಸಿಕೆಯ 200 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಬೆಂಗಳೂರಿನ ಸ್ಟೆಲಿಸ್ ಬಯೋಫಾರ್ಮಾ ಮುಂದಾಗಿದೆ. ಈ ರಷಿಯನ್ ಲಸಿಕೆಯ ತಯಾರಿಕೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ನಾಲ್ಕನೇ ಭಾರತೀಯ ಕಂಪೆನಿ ಇದಾಗಿದೆ.

ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿರುವ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್‌ನ ಬಯೋಫಾರ್ಮಾಸ್ಯುಟಿಕಲ್ ವಿಭಾಗವಾದ ಸ್ಟೆಲಿಸ್, ರಷಿಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್(ಆರ್​​ಡಿಐಎಫ್)​ನೊಂದಿಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಭಾರತ ಈ ಲಸಿಕೆಯನ್ನು ವರ್ಷಕ್ಕೆ ಸುಮಾರು 550 ಮಿಲಿಯನ್ ಡೋಸ್​ಗಳನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಿದೆ.

2021 ರ ಜುಲೈನಿಂದ ಸೆಪ್ಟೆಂಬರ್​​ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆ ಮತ್ತು ಸರಬರಾಜನ್ನು ಪ್ರಾರಂಭಿಸಲು ಸ್ಟೆಲಿಸ್ ಕಂಪನಿ ಉದ್ದೇಶಿಸಿದೆ. ಆರಂಭಿಕವಾಗಿ 200 ಮಿಲಿಯನ್ ಡೋಸ್​ಗಳನ್ನು ತಯಾರಿಸುವ ಒಪ್ಪಂದವಾಗಿದ್ದು, ಹೆಚ್ಚಿನ ಉತ್ಪಾದನೆಯ ಅವಕಾಶವೂ ತೆರೆದಿದೆ. ಏಕೆಂದರೆ "ಆರಂಭಿಕ ಒಪ್ಪಂದವನ್ನು ಮೀರಿ ಹೆಚ್ಚುವರಿ ಪೂರೈಕೆ ಮಾಡಲು ಸ್ಟೆಲಿಸ್ ಆರ್​​ಡಿಐಎಫ್ ಜೊತೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ" ಎಂದು ಆರ್​​ಡಿಐಎಫ್ ಹೇಳಿಕೆ ನೀಡಿದೆ.

ಈ ಮುನ್ನ ಹೈದರಾಬಾದ್​ನ ಗ್ಲಾಂಡ್ ಫಾರ್ಮ ಮತ್ತು ಹೆಟೆರೋ ಬಯೋಫಾರ್ಮಗಳು ಕ್ರಮವಾಗಿ 252 ಮಿಲಿಯನ್ ಡೋಸ್​ಗಳ ಮತ್ತು 100 ಮಿಲಿಯನ್ ಡೋಸ್​ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿವೆ. ಅದಲ್ಲದೆ, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪೆನಿ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಎಫಿಕೆಸಿ ಅಧ್ಯಯನವನ್ನು ಮುಂದುವರೆಸಿ, ತುರ್ತು ಬಳಕೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದೆ. ಅನುಮೋದನೆ ಸಿಕ್ಕಲ್ಲಿ ರೆಡ್ಡೀಸ್ ಕೂಡ 200 ಮಿಲಿಯನ್ ಡೋಸ್​ಗಳ ಉತ್ಪಾದನೆ ಮಾಡಲಿದೆ ಎನ್ನಲಾಗಿದೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ