ಮೈಸೂರು: ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ತಂಡಗಳು ಕ್ರಮವಾಗಿ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬಾಲಕ, ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಶಾಲಾ ಶಿಕ್ಷಣ ಇಲಾಖೆ(ಪ.ಪೂ.) ಮೈಸೂರು ಜಿಲ್ಲೆ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಸಂಯುಕ್ತಾಶ್ರಯಲ್ಲಿ ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯಾವಳಿಯ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ ತಂಡ 2-1 ರಿಂದ ದಕ್ಷಿಣ ಕನ್ನಡ ತಂಡವನ್ನು ಸೋಲಿಸಿತು.
ಮೊದಲ ಸಿಂಗಲ್ಸ್‌ನಲ್ಲಿ ಬೆಂ.ದಕ್ಷಿಣದ ದಯಾನ್ 21-5, 21-5 ರಿಂದ ದಕ್ಷಿಣ ಕನ್ನಡದ ಅನ್ಶುಲ್ ಅವರನ್ನು ಸೋಲಿಸಿದರು. ಬಳಿಕ ಡಬಲ್ಸ್‌ನಲ್ಲಿ ದ. ಕನ್ನಡದ ಆರ್ಯ ಮತ್ತು ತಿಲಕ್ ಜೋಡಿ 8-21,21-14, 21-13 ರಿಂದ ಬೆಂ. ದಕ್ಷಿಣದ ಸುಮಿತ್ ಮತ್ತು ಕ್ರಿಸ್ ಜೋಡಿಯನ್ನು ಮಣಿಸಿ ಪ್ರತಿರೋಧ ನೀಡಿದರೂ ರಿವರ್ಸ್ ಸಿಂಗಲ್ಸ್‌ನಲ್ಲಿ ಕ್ರಿಸ್ 10-21, 21-11, 21-19 ರಿಂದ ದ.ಕನ್ನಡದ ಭವೀಶ್‌ರನ್ನು ಸೋಲಿಸಿ ಬೆಂ.ದಕ್ಷಿಣ ತಂಡವನ್ನು ಗೆಲುವಿನ ದಡ ಸೇರಿದರು.
ಬಾಲಕಿಯರ ಫೈನಲ್ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡವು 2-1 ರಿಂದ ಮೈಸೂರು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕೇರಿತು. ಪಂದ್ಯದ ಮೊದಲ ಸೆಟ್‌ನಲ್ಲಿ ಮೈಸೂರಿನ ದಿಯಾ 21-8, 21-8 ರಿಂದ ಬೆಂ. ಉತ್ತರದ ಅನನ್ಯರನ್ನು ಸೋಲಿಸಿ ತಂಡಕ್ಕೆ ಮುನ್ನಡೆ ನೀಡಿದರು. ಬಳಿಕ ಡಬಲ್ಸ್‌ನಲ್ಲಿ ಬೆಂ.ಉತ್ತರದ ರಾಜುಲಾ ಮತ್ತು ಮೌನಿತಾ ಜೋಡಿ 21-13, 21-13 ರಿಂದ ಮೈಸೂರಿನ ದಿಯಾ ಮತ್ತು ಸಿಂಚನಾ ವಿರುದ್ಧ ಜಯ ಸಾಧಿಸಿ ತಿರುಗೇಟು ನೀಡಿತು. ತೀವ್ರ ಕುತೂಹಲ ಕೆರಳಿಸಿದ್ದ ರಿವರ್ಸ್ ಸಿಂಗಲ್ಸ್‌ನಲ್ಲಿ ರಾಜುಲಾ 21-6, 21-6 ರಿಂದ ಮೈಸೂರಿನ ಅನನ್ಯ ಅವರನ್ನು ಸೋಲಿಸಿ ಬೆಂ.ಉತ್ತರದ ತಂಡಕ್ಕೆ ಗೆಲುವಿನ ಉಡುಗರೆ ನೀಡಿದರು.
ಬಹುಮಾನ ವಿತರಣೆ: ವೇದಿಕೆ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಶ್ರೀ ರಾಮಕೃಷ್ಣ ವಿದ್ಯಾಶಾಲಾ ಕರೆಸ್ಪಾಂಡೆಂಟ್ ಸ್ವಾಮಿ ಯುಕ್ತೇಶಾನಂದ ಜೀ, ಇಲಾಖೆಯ ಉಪ ನಿರ್ದೇಶಕ ಎಂ.ಮರಿಸ್ವಾಮಿ, ಮೈಸೂರು ವಿವಿ ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸಿ.ವೆಂಕಟೇಶ್, ಪ್ರಾಂಶುಪಾಲ ಟಿ.ಕೆ.ಚಂದ್ರಶೇಖರ್ ಇತರರಿದ್ದರು.