ನ್ಯೂಸ್

ಲಾಕ್​ಡೌನ್​ ಸಮಯದಲ್ಲಿ ನಿಮ್ಮ ವಾಹನ ಪೊಲೀಸರು ವಶಪಡಿಸಿಕೊಂಡಿದ್ದರೆ ನಾಳೆಯಿಂದ ಮರಳಿ ಪಡೆಯಬಹುದು

ಬೆಂಗಳೂರು: ಲಾಕ್​ಡೌನ್​ ಸಮಯದಲ್ಲಿ ರಾಜಧಾನಿಯಲ್ಲಿ ವಶಪಡಿಸಿಕೊಂಡಿದ್ದ ವಾಹನಗಳನ್ನು ಪೊಲೀಸರು ಶುಕ್ರವಾರದಿಂದ ಮರಳಿಸುವ ಪ್ರಕ್ರಿಯೆ ನಡೆಸಲಿದ್ದಾರೆ.

ಲಾಕ್​ಡೌನ್​ ಘೋಷಣೆ ಮಾಡಿದ ಬಳಿಕ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಗತ್ಯ ವಸ್ತುಗಳ ಸೇವೆಯಲ್ಲಿ ತೊಡಗಿರುವವರಿಗೆ ಪಾಸ್​ ನೀಡಿ ಸಂಚರಿಸಲು ಅನುಮತಿ ನೀಡಲಾಗಿತ್ತು. ಆದರೆ, ಪಾಸ್​ ಇಲ್ಲದೇ ಹಾಗೂ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಬೆಂಗಳೂರು ಒಂದರಲ್ಲೇ 50,000ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಲಾಕ್​ಡೌನ್​ ಅವಧಿ ಮುಗಿದ ಬಳಿಕ ಈ ವಾಹನಗಳನ್ನು ಮಾಲೀಕರಿಗೆ ಮರಳಿಸುವುದಾಗಿ ತಿಳಿಸಲಾಗಿತ್ತು. ಆದರೆ, ಮೇ 1ರಿಂದಲೇ ವಾಹನಗಳನ್ನು ಮಾಲೀಕರಿಗೆ ಒಪ್ಪಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ತಿಳಿಸಿದ್ದಾರೆ.

ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಾಹನಗಳನ್ನು ಪೊಲೀಸರ ವಶದಿಂದ ಮರಳಿ ಪಡೆಯಬಹುದು. ವಾಹನಗಳನ್ನು ಮರಳಿಸಲು ಸಿಎಂ ಹಾಗೂ ಗೃಹಸಚಿವರು ಅನುಮತಿ ನೀಡಿದ್ದಾರೆ ಎಂದು ರಾವ್​ ಹೇಳಿದ್ದಾರೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಯಾ ಪೊಲೀಸ್​ ಆಯುಕ್ತರು ಹಾಗೂ ವರಿಷ್ಠಾಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ದಾಖಲೆಗಳಿಲ್ಲದ ವಾಹನಗಳದ್ದೇ ಚಿಂತೆ: ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳ ಪೈಕಿ ದಾಖಲೆಗಳಿಲ್ಲದ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಇವನ್ನು ಇನ್ನಷ್ಟು ದಿನಗಳವರೆಗೆ ಪೊಲೀಸರೇ ಕಾಯಬೇಕಾಗಿದೆ. ಹಲವು ಕಳವು ಪ್ರಕರಣಗಳು ಕೂಡ ಬಯಲಾಗಬಹುದು.