ಬೆಂಗಳೂರು: ದೇಶದ 75ನೇ ಸ್ವಾತಂತ್ರ್ಯೋತ್ಸವ (2022)ದ ಹೊತ್ತಿಗೆ ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿ ರೂಪಿಸುವ ದೃಢ ಸಂಕಲ್ಪ ತೊಟ್ಟಿರುವ ರಾಜ್ಯ ಸರ್ಕಾರ ಇದಕ್ಕೆ ಪೂರಕವಾಗಿ ಸಮಗ್ರ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಬೆಂಗಳೂರಿಗೆ ನವಚೈತನ್ಯ ತುಂಬುವ ‘ಬೆಂಗಳೂರು ಮಿಷನ್-2022’ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡುವ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟರು. ಕರೊನೋತ್ತರ ಬೆಂಗಳೂರು ಮಹಾನಗರ ಹೀಗಿರಬೇಕೆಂಬ ಸ್ಪಷ್ಟ ಪರಿಕಲ್ಪನೆ ಹಾಗೂ ಬೆಳವಣಿಗೆ ವೇಗಕ್ಕೆ ಅನುಗುಣವಾಗಿ 20 ವರ್ಷಗಳ ಮುನ್ನೋಟ ಆಧರಿಸಿ, ಎಲ್ಲ ಆಯಾಮ ಗಳಲ್ಲೂ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಕಾಳಜಿ, ಆಸಕ್ತಿ ವಹಿಸಿದೆ.
ಯೋಜನೆಯ ನೀಲಿನಕ್ಷೆ ಸಿದ್ಧ: ಬೆಂಗಳೂರಿನ ಖ್ಯಾತಿಗೆ ಇನ್ನಷ್ಟು ಹೊಳಪು ನೀಡಿ ಹಳೆಯ ಬೇರಿಗೆ ಹೊಸ ತಲೆಮಾರು ಜೋಡಿಸುವ ರೀತಿ ನೀಲಿನಕ್ಷೆ ಸಿದ್ಧಪಡಿಸಿದೆ. ಸುಗಮ ಸಂಚಾರ, ಸ್ವಚ್ಛ, ಹಸಿರು ಹಾಗೂ ಜನ ಸಂಪರ್ಕ ವಲಯ ಗುರುತಿಸಿ, ಜ್ವಲಂತ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಿದೆ. ಆ ಮೂಲಕ ಕ್ಷಿಪ್ರಗತಿ ಬೆಳವಣಿಗೆ ಪರಿಣಾಮಗಳಿಗೆ ಪರಿಹಾರ ಕಂಡುಕೊಳ್ಳುವ ಆಶಯ ಹೊಂದಲಾಗಿದೆ. ಬದಲಾವಣೆಗೆ ತಕ್ಕಂತೆ ರೂಪುಗೊಂಡ ಯೋಜನೆ ಅನುಷ್ಠಾನಕ್ಕೆ ಸಂಸ್ಥೆಗಳನ್ನು ಗುರುತಿಸಿ ಜವಾಬ್ದಾರಿ ಒಪ್ಪಿಸಿ, 2 ವರ್ಷ ಕಾಲಮಿತಿ ವಿಧಿಸಲಾಗಿದೆ.ಅನುದಾನವನ್ನು ಬಜೆಟ್ನಲ್ಲಿ ಮೀಸಲಿರಿಸಲಾಗಿದೆ.
ಇದನ್ನೂ ಓದಿ: ಕರೊನಾ ಹೋಗುವುದರೊಳಗೆ ಬಂತು ಮತ್ತೊಂದು ಡೆಡ್ಲಿ ಸೋಂಕು! ದೇಶದ ಹಲವು ಭಾಗಗಳಲ್ಲಿ ಪತ್ತೆ, 9 ಸಾವು! ವಿಶ್ವದ ಅತ್ಯುತ್ತಮ ನಗರಗಳಲ್ಲಿ ಬೆಂಗಳೂರು ಒಂದಾಗಬೇಕು ಎಂಬ ಸದಾಶಯದೊಂದಿಗೆ ‘ಬೆಂಗಳೂರು ಮಿಷನ್-2022’ ಮಹತ್ವಾಕಾಂಕ್ಷಿ ಕಾರ್ಯಯೋಜನೆ ರೂಪಿಸಿ, 2 ವರ್ಷಗಳ ಕಾಲಮಿತಿ ವಿಧಿಸಲಾಗಿದೆ. ಯೋಜನೆಗೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ