ನ್ಯೂಸ್

ಕಾವೇರಿ 'ವರಿ'; ಶುಕ್ರವಾರದ ಬಂದ್​ಗೆ ಅವಕಾಶವಿಲ್ಲ!; ಡಿಸಿಎಂ ಹೇಳಿದ್ದೇನು?

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಸೆ.29ರಂದು ನಡೆಸಲು ಉದ್ದೇಶಿಸಿರುವ ಬಂದ್​ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಬಯಸಿದಂತಿದೆ.

ಮಂಗಳವಾರ ನಡೆದ ಬಂದ್​ಗೆ ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಕೆಲವು ಪ್ರಮುಖ ಕನ್ನಡ ಸಂಘಟನೆಗಳು, ಕ್ಯಾಬ್​ ಚಾಲಕರ ಸಂಘಟನೆಗಳು ಸರ್ಕಾರದ ಒತ್ತಾಯಕ್ಕೆ ಮಣಿದು ಬಂದ್​ಗೆ ಬೆಂಬಲ ವ್ಯಕ್ತಪಡಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.

ಇನ್ನೊಂದೆಡೆ ಶುಕ್ರವಾರ ಮತ್ತೊಮ್ಮೆ ಬಂದ್​ ನಡೆಸುವ ಕುರಿತು ಚರ್ಚೆಗಳು ನಡೆದಿವೆ. ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಲು ಬಯಸಿವೆ. ಆದರೆ, ಸರ್ಕಾರ ಈ ಪ್ರಯತ್ನಕ್ಕೆ ತಡೆ ಹಾಕುವ ಎಲ್ಲ ಲಕ್ಷಣ ಕಾಣಿಸಿದೆ.

ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ರಾಜ್ಯದ ಜನರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಬಂದ್‌ ಮಾಡಲು ನ್ಯಾಯಾಲಯ ಬಿಡುವುದಿಲ್ಲ, ಆದ ಕಾರಣ ಸೆ.29 ರ ಬಂದ್‌ಗೆ ಅವಕಾಶವಿಲ್ಲ ಎಂದರು.

ಸಾರ್ವಜನಿಕರ ಆಸ್ತಿ ಹಾನಿ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇದನ್ನು ಮಾಡುವುದಿಲ್ಲ, ನ್ಯಾಯಾಲಯ ಮಾಡುತ್ತದೆ. ಬಂದ್ ಮಾಡುವ ಮುಂಚಿತವಾಗಿ ಸೂಚನೆಯನ್ನೂ ನೀಡಿದೆ ಎಂದು ಹೇಳಿದರು.

ಕಾವೇರಿ ಹೋರಾಟದ ಜತೆಗೆ ರಾಜಕೀಯ ಟೀಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಟೀಕೆ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಪ್ರಜಾಪ್ರಭುತ್ವದ ಹಕ್ಕನ್ನು ನಾವು ಪ್ರಶ್ನಿಸಬಾರದು. ಮಾಧ್ಯಮಗಳು ಸಹ ನಮ್ಮ‌ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೇಳುತ್ತಾರೆ,‌ ಇದೆಲ್ಲಾ ರಾಜಕೀಯದ ಒಂದು ಭಾಗ ಎಂದು ಉತ್ತರಿಸಿದರು.

ಇಂದು (ಸೆ.26) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ ಅ.15 ರ ತನಕ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಶಿಫಾರಸ್ಸು ಮಾಡಿದೆ.