ಬೆಂಗಳೂರು: ಕರೊನಾ ಮಹಾಮಾರಿಯನ್ನು ಕಟ್ಟಿಹಾಕುವುದಕ್ಕಾಗಿ ಜಾರಿಗೊಳಿಸಿರುವ ಲಾಕ್ಡೌನ್ ಬದಲಾದ ಸ್ವರೂಪದಲ್ಲಿ ಏಪ್ರಿಲ್ ಅಂತ್ಯದವರೆಗೂ ಮುಂದುವರಿಯುವುದು ನಿಶ್ಚಿತ. ಆದರೆ ದೇಶದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸೋಂಕು ಹರಡದ ‘ಸುರಕ್ಷಿತ ಪ್ರದೇಶ’ಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾನುವಾರ ಇಲ್ಲವೇ ಸೋಮವಾರ ಹೊಸ ಸ್ವರೂಪದ ಲಾಕ್ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.
ಕರೊನಾ ವಿಚಾರವಾಗಿ ಶನಿವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಾಲ್ಕು ತಾಸು ಸುದೀರ್ಘ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಲಹೆ, ನಿರ್ದೇಶನಗಳನ್ನು ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಜನರ ಮುಂದಿಟ್ಟರು.
ಲಾಕ್ಡೌನ್ ವಿಸ್ತರಣೆ ಕುರಿತು ಸಲಹೆಗಳು ಬಂದಿವೆ. ಯಾವುದೇ ಕಾರಣಕ್ಕೂ ಲಾಕ್ಡೌನ್ ಸಡಿಲಗೊಳಿಸಬಾರದು. ಮುಂದಿನ 15 ದಿನ ಹೇಗಿರಲಿದೆ ಎಂಬುದನ್ನು ತಿಳಿಸುವ ಮಾರ್ಗಸೂಚಿ ಒಂದೆರಡು ದಿನಗಳಲ್ಲಿ ಹೊರಬೀಳುವುದಾಗಿ ಪ್ರಧಾನಿ ತಿಳಿಸಿದ್ದಾರೆಂದು ಬಿಎಸ್ವೈ ಹೇಳಿದರು. ದೇಶದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಸಮುದಾಯದಲ್ಲಿ ಹರಡುವ ಸಾಧ್ಯತೆಗಳ ಕುರಿತು ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ ಎಂದಿದ್ದಾರೆ.
ಹಾಟ್ಸ್ಪಾಟ್ಗಳನ್ನು ಗುರುತಿಸಿ, ಸೀಲ್ಡೌನ್ ಮಾಡುವುದು ಹಾಗೂ ಇತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ರಾಜ್ಯಗಳು ಮಾಡುತ್ತಿರುವ ನಿಯಂತ್ರಣದ ಪ್ರಯತ್ನ ಹಾಗೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆಯ ದರ ಲಾಕ್ಡೌನ್ ನಂತರ ಶೇ.28ರಿಂದ ಶೇ.14 ಕ್ಕೆ ಇಳಿದಿರುವುದು ಸಮಾಧಾನದ ಸಂಗತಿ ಎಂದು ಮೋದಿ ಹೇಳಿದರು. ಜತೆಗೆ ಪರೀಕ್ಷಾ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಸಿಎಂಆರ್ಗೆ ಅರ್ಜಿ ಸಲ್ಲಿಸುವಂತೆ ಖಾಸಗಿ ಪ್ರಯೋಗಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸಲಹೆ ನೀಡುವಂತೆ ಪ್ರಧಾನ ಮಂತ್ರಿಯವರು ಎಲ್ಲ ರಾಜ್ಯಗಳಿಗೆ ಸೂಚಿಸಿದರು ಎಂದು ಬಿಎಸ್ವೈ ತಿಳಿಸಿದರು.
ಕಿಟ್ ಆತಂಕ ದೂರ: ಕರೊನಾ ನಿಯಂತ್ರಣಕ್ಕೆ ಅಗತ್ಯ ವೈದ್ಯಕೀಯ ವ್ಯವಸ್ಥೆ ಬಗ್ಗೆ ಪ್ರಧಾನಿ ಮೋದಿ ಸಂವಾದದಲ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಸುಧಾರಣೆ ಆಗಿದೆ. ಈವರೆಗೆ 2.84 ಲಕ್ಷ ಪಿಪಿಇ ಕಿಟ್ಗಳನ್ನು (ವೈಯಕ್ತಿಕ ರಕ್ಷಣಾ ಕಿಟ್) ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗುವುದು. ಪ್ರತಿ 2 ದಿನಗಳಿಗೊಮ್ಮೆ 2 ಲಕ್ಷ ಮಾಸ್ಕ್ ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಒಂದು ಪ್ರಯೋಗಾಲಯವಿತ್ತು, ಈಗ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 220ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏ.30ಕ್ಕೆ ಪರೀಕ್ಷಾ ಪ್ರಯೋ ಗಾಲಯ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುವುದು. ಮೇ 31ರ ವೇಳೆಗೆ ನಿತ್ಯ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಸನ್ನದ್ಧ ಸ್ಥಿತಿಗೆ ಸೂಚನೆ: ಮುಂದಿನ 3-4 ವಾರ 130 ಕೋಟಿ ಜನರಿಗೆ ಬಹಳ ಪ್ರಮುಖ ಅವಧಿ. ಈ ಅವಧಿಯಲ್ಲಿ ನಾವು ಮಾಡಿರುವ ಪ್ರಯತ್ನದ ಪರಿಣಾಮ ಏನಾಗುವುದು ಎಂಬುದರ ಕುರಿತು ಸಿದ್ಧರಾಗಿರಬೇಕು ಎಂದು ಪ್ರಧಾನಿ ಎಲ್ಲ ರಾಜ್ಯಗಳಿಗೆ ತಿಳಿಸಿದ್ದಾರೆ.
ಕೈಗಾರಿಕೆ, ಕಾರ್ವಿುಕರಿಗೆ ಆದ್ಯತೆ: ಮುಂದಿನ 2 ವಾರದ ಲಾಕ್ಡೌನ್ ಹಿಂದಿನ 3 ವಾರಗಳ ಲಾಕ್ಡೌನ್ಗಿಂತ ಭಿನ್ನವಾಗಿರುತ್ತದೆ. ವಿಶೇಷವಾಗಿ ಆರ್ಥಿಕ ಚಟುವಟಿಕೆಗಳಿಗೆ ಸಹಾಯವಾಗುವಂತೆ, ಕೃಷಿ, ಕೈಗಾರಿಕೆ ಹಾಗೂ ಕಾರ್ವಿುಕರಿಗೆ ಉದ್ಯೋಗದ ದೃಷ್ಟಿಯಿಂದ ಕೆಲವು ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಸರ್ಕಾರಿ ಕಚೇರಿಗಳು ಭಾಗಶಃ ನೌಕರರೊಂದಿಗೆ ಕಾರ್ಯ ನಿರ್ವಹಿಸಲಿವೆ. ಮೀನುಗಾರಿಕೆ ಮತ್ತು ಮೀನು ಸಂಸ್ಕರಣಾ ಚಟುವಟಿಕೆಗಳಿಗೆ ಏ.10ರಂದು ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು .
ಅಮಿತ್ ಷಾ ಸೂತ್ರ: ಲಾಕ್ಡೌನ್ ಕಠಿಣ ಪಾಲನೆಗೆ ಗೃಹ ಸಚಿವ ಅಮಿತ್ ಷಾ ಅವರು ಸೂತ್ರ ರೂಪಿಸುತ್ತಿದ್ದಾರೆ. ವಿಡಿಯೋ ಸಂವಾದದಲ್ಲಿ ಪ್ರಧಾನಿ ಮಾತಿಗೆ ದನಿಗೂಡಿಸಿದ ಗೃಹ ಸಚಿವರು, ಜನ ಸಂದಣಿಯಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು, ಕ್ಲಾಂಪ್ಡೌನ್ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಕೈಗೊಳ್ಳುವಂತೆಯೂ ಸೂಚಿಸಿದರು. ಈ ಬಗ್ಗೆ ಮಾರ್ಗಸೂಚಿಯೂ ಬರಬಹುದು ಎಂದು ಯಡಿಯೂರಪ್ಪ ಹೇಳಿದರು.
ತಬ್ಲಿಘಿಗಳಿಗೆ ಎಚ್ಚರಿಕೆ: ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ವೈದ್ಯರ ಮೇಲೆ ತಬ್ಲಿಘಿಗಳು ಹಾಗೂ ಇತರರು ಹಲ್ಲೆ ಮಾಡುತ್ತಿರುವ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ವೈದ್ಯಕೀಯ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುವುದನ್ನು ಸಹಿಸಲಾಗದು, ನಿರ್ದಾಕ್ಷಿ್ಯಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಎಲ್ಲ ರಾಜ್ಯಗಳಿಗೆ ಸೂಚಿಸಿದ್ದಾರೆ.