ನ್ಯೂಸ್

ಬನಶಂಕರಿ ನಿನ್ನ ಪಾದಕ ಶಂಭುಕೋ...

ದೊಡ್ಡದೆಂದರೆ ಬಾದಾಮಿಯ ಬನಶಂಕರಿದೇವಿ ಜಾತ್ರೆ. ಏಕೆಂದರೆ ಈ ಜಾತ್ರೆ ಒಂದು ತಿಂಗಳ ಕಾಲ ನಡೆಯುವುದು. ಪ್ರತಿವರ್ಷ ಇದು ಪುಷ್ಯಮಾಸದ ಹುಣ್ಣಿಮೆ ದಿನ ಬರುವುದು. ಆ ದಿನವನ್ನು ‘ಬನದ ಹುಣ್ಣಿಮೆ’ ಎನ್ನುವರು. ಭಕ್ತರ ಸಮಾಗಮಕ್ಕೆ ಸಾಕ್ಷಿಯಾಗಲಿರುವ ಈ ಜಾತ್ರೆಯ ಕುರಿತ ಬರಹ ಇಲ್ಲಿದೆ.

ಉತ್ತರ ಕರ್ನಾಟಕ ಭಾಗದ ಅತಿ ದೊಡ್ಡ ಜಾತ್ರೆ ಎಂದೇ ಜನಜನಿತವಾಗಿರುವುದು ಜಗನ್ಮಾತೆ, ಶಾಕಂಭರೀ, ಶಂಕರಿ, ಬನಶ್ರೀ ಮತ್ತಿತರ ನಾಮಧೇಯಗಳಿಂದ ಜಗತ್ಪ್ರಸಿದ್ಧಳಾಗಿರುವ ಬಾದಾಮಿ ಬನಶಂಕರಿದೇವಿ ಜಾತ್ರೆ. ಇದು ಬಹುತೇಕ ಜನವರಿ ತಿಂಗಳಲ್ಲಿ ನೆರವೇರುತ್ತವೆ. ವರ್ಷದಿಂದ ವರ್ಷಕ್ಕೆ ಸ್ವಲ್ಪ ವ್ಯತ್ಯಾಸವಾದರೂ ಸಂಕ್ರಮಣಕ್ಕಿಂತ ಮೊದಲು ಅಥವಾ ನಂತರ ಬನಶಂಕರಿದೇವಿ ಜಾತ್ರೆ ನಡೆಯುವುದು ವಾಡಿಕೆ. ಆದರೆ, ಈ ವರ್ಷ ಎರಡು ಒಂದೇ ವಾರದಲ್ಲಿ ನಡೆಯುತ್ತಿರುವುದರಿಂದ ಬನಶಂಕರಿ ದೇವಿ ಜಾತ್ರೆ ಇನ್ನಷ್ಟು ಕಳೆಗಟ್ಟಲಿದೆ.

ಪ್ರತಿ ವರ್ಷ ಸಂಕ್ರಮಣದ ಪುಣ್ಯಸ್ನಾನಕ್ಕಾಗಿ ಅಸಂಖ್ಯಾತ ಭಕ್ತರು ಬನಶಂಕರಿಗೆ ಆಗಮಿಸುತ್ತಾರೆ. ದಶಕದಿಂದಲೂ ಭಣಗುಡುತ್ತಿದ್ದ ಹರಿದ್ರಾತೀರ್ಥ ಈ ಬಾರಿ ಭರ್ತಿ ಆಗಿರುವುದು ಸಂಕ್ರಮಣಕ್ಕೆ ಮತ್ತಷ್ಟು ಮೆರುಗು ತಂದಿದ್ದು, ಭಕ್ತರ ಖುಷಿ ಇಮ್ಮಡಿಗೊಂಡಿದೆ. ಹರಿದ್ರಾತೀರ್ಥದಲ್ಲಿ ಪುಣ್ಯಸ್ನಾನ ಮಾಡುವ ಭಕ್ತರು ದೇವಿಯ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ಭಕ್ತರು ಸವದತ್ತಿ ಯಲ್ಲಮ್ಮನ ಜಾತ್ರೆ ಮುಗಿಸಿಕೊಂಡು ಬನಶಂಕರಿ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಆದ್ದರಿಂದ ತಿಂಗಳುಗಟ್ಟಲೆ ನಡೆಯುವ ಬನಶಂಕರಿ ದೇವಿ ಜಾತ್ರೆ ಜಾತಿ, ಮತ, ಪಂಥ, ಭೇದಭಾವ ಮರೆತು ಲಕ್ಷಾಂತರ ಭಕ್ತರ ಸಮಾಗಮಕ್ಕೆ ಸಾಕ್ಷಿಯಾಗಲಿದೆ.

ದೇವಿ ಹಿನ್ನೆಲೆ: ಸಿಂಹವಾಹಿನಿಯಾದ ಬನಶಂಕರಿ ದೇವಿ ಚಾಲುಕ್ಯರ ಕುಲದೇವತೆ ಎಂಬ ಪ್ರತೀತಿಯಿದೆ. ಚಾಲುಕ್ಯರ ಅರಸರೇ ದ್ರಾವಿಡಶೈಲಿಯಲ್ಲಿ ದೇವಾಲಯ ನಿರ್ವಿುಸಿದರು ಎಂದು ಹೇಳಲಾಗುತ್ತದೆ. ಅಲ್ಲದೆ, ರಾಷ್ಟ್ರಕೂಟರು, ವಿಜಯನಗರ ಹಾಗೂ ಪೇಶ್ವೆ ಅರಸರು ದೇವಿಯ ಆರಾಧಕರಾಗಿದ್ದರು. ಹಂತಹಂತವಾಗಿ ದೇವಾಲಯದ ಜೀಣೋದ್ಧಾರ ಕೈಗೊಂಡರು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

10ರಂದು ಮಹಾರಥೋತ್ಸವ: ದೇಶದ ಶಕ್ತಿಪೀಠಗಳಲ್ಲಿ ಒಂದಾಗಿರುವ ಬನಶಂಕರಿ ದೇವಿ ಜಾತ್ರಾಮಹೋತ್ಸವವು ಪುಷ್ಯ ಶುಕ್ಲ ಅಷ್ಟಮಿಯಂದು (ಜ. 3) ಘಟಸ್ಥಾಪನೆ, ಧ್ವಜಾರೋಹಣದೊಂದಿಗೆ ಆರಂಭವಾಗುತ್ತದೆ. ದೇವಿಯು ಎಂಟು ಕೈಗಳಿಂದ ಕೂಡಿರುತ್ತಾಳೆ. ಬಲಗೈಯಲ್ಲಿ ಖಡ್ಗ, ಘಂಟೆ, ತ್ರಿಶೂಲ ಮತ್ತು ಲಿಪಿ ಹಾಗೂ ಎಡಗೈಯಲ್ಲಿ ಡಮರು, ಢಾಲು, ರುಂಡ ಮತ್ತು ಅಮೃತಪಾತ್ರೆಗಳಿವೆ. ದೇವಿಯು ತ್ರಿನೇತ್ರವುಳ್ಳವಳು. ರಥೋತ್ಸವಕ್ಕೂ ಮೊದಲೇ ದೇವಿಗೆ ವಿಶೇಷ ಪೂಜೆಗಳು ಆರಂಭವಾಗುತ್ತವೆ. ಅಷ್ಟ ಸಿದ್ಧಿ ಕರುಣಿಸು ತಾಯಿ ಎಂದು ಶ್ರದ್ಧಾ, ಭಕ್ತಿಯಿಂದ ಮಂತ್ರಘೊಷಗಳೊಂದಿಗೆ ಪೂಜಿಸಿ, ಜಾತ್ರೆಯ ಮುನ್ನಾದಿನ ಘಟಸ್ಥಾಪನೆ ಮಾಡುವರು. ಪುಷ್ಯ ಶುದ್ಧ ಚತುರ್ದಶಿಯಂದು (ಜ. 9) ದೇವಿಗೆ 108 ತರಕಾರಿಗಳ ಪಲ್ಯವನ್ನು ಮಾಡಿ ನೈವೇದ್ಯ ಮಾಡುವರು. ಆ ದಿನವನ್ನು ‘ಪಲ್ಯದ ಹಬ್ಬ’ ಎಂದು ಕರೆಯುವರು. ಪೌರ್ಣಿಮೆಯಂದು (ಜ. 10 - ಶುಕ್ರವಾರ) ಸಂಜೆ ಅಸಂಖ್ಯಾತ ಭಕ್ತಸಮೂಹದ ಮಧ್ಯೆ ವಿಜೃಂಭಣೆಯಿಂದ ಮಹಾ ರಥೋತ್ಸವ ಜರುಗುತ್ತದೆ. ಭಕ್ತರು ‘ಬಾದಾಮಿ ಬನಶಂಕರಿ ನಿನ್ನ ಪಾದಕ ಶಂಭುಕೋ... ಶಂಭುಕೋ...’ ಎಂದು ಘೊಷಣೆ ಕೂಗುತ್ತ ಶ್ರದ್ಧಾ ಭಕ್ತಿಯಿಂದ ರಥ ಎಳೆದು ಪುನೀತರಾಗುತ್ತಾರೆ.

ಹಳ್ಳಿ ಬಂಡಿಯಲ್ಲಿ ಹಗ್ಗ: ರಥೋತ್ಸವಕ್ಕೆ ಗದಗ ಜಿಲ್ಲೆ ರೋಣ ತಾಲೂಕು ಮಾಡಲಗೇರಿ ಗ್ರಾಮದಿಂದ ತೇರಿನ ಹಗ್ಗ ತರಲಾಗುತ್ತದೆ. ಸಿಂಗರಿಸಿದ ಹಳ್ಳಿ ಬಂಡಿಯಲ್ಲಿ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ತಂದು ದೇವಿಗೆ ಅರ್ಪಿಸಲಾಗುತ್ತದೆ. ನಂತರ ತೇರಿನ ಹಗ್ಗಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅಲಂಕೃತ ರಥಕ್ಕೆ ಕಟ್ಟಿ ಭಕ್ತರು ಭಾವಪರವಶದಲ್ಲಿ ಜಯಘೊಷ ಹಾಕುತ್ತ ರಥ ಎಳೆಯುತ್ತಾರೆ. ಪುಷ್ಯ ಕೃಷ್ಣ ಚತುರ್ಥಿಯಂದು (ಜ. 14) ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಧಾರ್ವಿುಕ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತವೆ.

ದೇಸಿ ಊಟಕ್ಕೆ ಆದ್ಯತೆ : ದೇವಿಯ ದರ್ಶನಕ್ಕೆ ಬಂದವರು ಇಲ್ಲಿ ಊಟ ಮಾಡದೆ ಹಿಂದಿರುಗುವುದು ಅಪರೂಪ. ಸುತ್ತಲಿನ ಗ್ರಾಮೀಣಭಾಗದ ಮಹಿಳೆಯರು ಮನೆಯಿಂದಲೇ ಸಿದ್ಧಪಡಿಸಿಕೊಂಡು ಬಂದ ಊಟವನ್ನು ಪ್ರವಾಸಿಗರಿಗೆ ಕೊಡುತ್ತಾರೆ. ಅದರಲ್ಲೂ ವಿಶೇಷವಾಗಿ ರೊಟ್ಟಿ, ವಿವಿಧ ಪಲ್ಲೆಗಳು, ಶೇಂಗಾ ಹಿಂಡಿ, ಮೊಸರು, ತಾಜಾ ಹಸಿ ತರಕಾರಿಯನ್ನು ಕಡಿಮೆ ಬೆಲೆಯಲ್ಲಿ ಉಣಬಡಿಸುವುದು ವಿಶೇಷ.

ಭರಪೂರ ಮನರಂಜನೆ : ಬಾದಾಮಿ ಬನಶಂಕರಿ ದೇವಿಯ ಜಾತ್ರೆ ಮನರಂಜನೆಯ ಜಾತ್ರೆಯೂ ಹೌದು. ಉತ್ತರ ಕರ್ನಾಟಕದ ಜನಪ್ರಿಯ ನಾಟಕ ಕಂಪನಿಗಳು ಇಲ್ಲಿ ಬೀಡು ಬಿಡುತ್ತವೆ. ಹಲವು ಸಿನಿಮಾ ಟೆಂಟ್​ಗಳು ನಿರ್ವಣವಾಗಿರುತ್ತವೆ. ಬೆಳಗು ಮುಂಜಾವು ಮೂರ್ನಾಲ್ಕು ಪ್ರದರ್ಶನಗಳು ಇಲ್ಲಿ ಸಾಮಾನ್ಯ. ಸುತ್ತಲಿನ ಭಾಗದ ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ಬಂಡಿ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿ, ದೇವಿಗೆ ನೈವೇದ್ಯ ಮಾಡಿ, ಕುಟುಂಬದವರೊಡಗೂಡಿ ಜಾತ್ರೆಯ ನೈಜ ಸೊಬಗನ್ನು ಸವಿಯುತ್ತಾರೆ.

ತುಂಬಿದ ಹರಿದ್ರಾತೀರ್ಥ: ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿರುವ ಹರಿದ್ರಾತೀರ್ಥ ವಿಶೇಷವಾದುದು. ಕಳೆದ ಹದಿನೈದು ವರ್ಷಗಳಿಂದ ಅಂತರ್ಜಲ ಕಡಿಮೆಯಾಗಿ ನೀರಿಲ್ಲದೆ ಭಣಗುಡುತ್ತಿದ್ದ ಈ ಹರಿದ್ರಾತೀರ್ಥ ಈ ಬಾರಿ ತುಂಬಿಕೊಂಡಿದೆ. ವಿಶೇಷ ಯೋಜನೆಯ ಮೂಲಕ ಪೈಪ್ ಮೂಲಕ ಹೊಂಡಕ್ಕೆ ನೀರನ್ನು ತುಂಬಿಸುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಭಕ್ತರು ತೀರ್ಥದಲ್ಲಿ ಮಿಂದು ದೇವಿಯ ದರ್ಶನಕ್ಕೆ ತೆರಳುತ್ತಾರೆ. ನವದಂಪತಿಗಳು, ಮಕ್ಕಳಾಗದವರು, ಸಂಕಷ್ಟದಲ್ಲಿರುವವರು ದೇವಿಗೆ ವಿಶೇಷ ಹರಕೆ ಹೊರುತ್ತಾರೆ. ಮಕ್ಕಳಿಗಾಗಿ ಹರಕೆ ಹೊತ್ತ ಭಕ್ತರು ಇಷ್ಟಾರ್ಥ ಪೂರೈಸಿದ ಬಳಿಕ ಮಕ್ಕಳೊಂದಿಗೆ ಬಂದು ಹರಿದ್ರಾತೀರ್ಥದಲ್ಲಿ ಬಾಳೆದಿಂಡಿನ ತೆಪ್ಪದ ಮೇಲೆ ಮಕ್ಕಳು ಕುಳ್ಳಿರಿಸಿ ಒಂದು ದಂಡೆಯಿಂದ ಮತ್ತೊಂದು ದಂಡಕ್ಕೆ ತಲುಪಿಸಿ ಹರಕೆ ತೀರಿಸುತ್ತಾರೆ.

ಬಸಪ್ಪ ಎಸ್. ಕುಂಬಾರ ಬಾಗಲಕೋಟೆ