ಹಾಸನ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಸುತ್ತೋಲೆಯಂತೆ ಹಾಸನ ಜಿಲ್ಲೆಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ವಿಗ್ರಹಗಳು ಹಾಗೂ ಲೋಹಮಿಶ್ರಿತ ರಾಸಾಯನಿಕ ಅಲಂಕೃತ ಗಣೇಶ ವಿಗ್ರಹಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದ ನಂತರ ಸ್ಥಳೀಯ ಸಂಸ್ಥೆಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‌ಗಳಲ್ಲಿ/ಕಲ್ಯಾಣಿಗಳ ಪಕ್ಕದಲ್ಲಿ ಹಸಿಕಸ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಪ್ಲಾಸ್ಟಿಕ್ ಬಾಟಲ್, ಬಟ್ಟೆ ಇತ್ಯಾದಿಗಳನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು.
ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಅನುಮತಿ ಪಡೆದು ಗಣೇಶ ವಿಗ್ರಹ ಸ್ಥಾಪನೆ ಮಾಡಿ ಪೂಜಿಸುವ ಸ್ಥಳಗಳಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್ ಮತ್ತು ಇತರ ನಿಷೇಧಿತ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದೆ. ಆದೇಶಕ್ಕೆ ವಿರುದ್ಧವಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳ ಮಾರಾಟ, ಖರೀದಿ ಕಂಡುಬಂದಲ್ಲಿ ಕ್ರಮ ವಹಿಸುವುದಾಗಿ ಎಚ್ಚರಿಸಿದ್ದಾರೆ.