ನ್ಯೂಸ್

ಆನ್​ಲೈನ್ ಮನಿ ಗೇಮಿಂಗ್ ನಿಷೇಧ; ಏನಿದು ಆಟ? ಏನೆಲ್ಲ ಕಹಿ ಘಟನೆಗಳು? ಇಲ್ಲಿದೆ ಪೂರ್ಣ ವಿವರ

ಕಳೆದ ಕೆಲ ವರ್ಷಗಳಿಂದ ಯುವಸಮೂಹದ ಬದುಕನ್ನೇ ದುಸ್ತರಗೊಳಿಸಿದ್ದ ಆನ್​ಲೈನ್ ಮನಿ ಗೇಮಿಂಗ್​ನ ಯುಗ ಕೊನೆಗೂ ಅಂತ್ಯವಾಗಿದ್ದು, ಕೋಟ್ಯಂತರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿವೆ. ಈ ಕೆಲಸ ಮುಂಚೆಯೇ ಮಾಡಿದ್ದರೆ ನಮ್ಮ ಮಗನನ್ನೋ, ಸಂಬಂಧಿಯನ್ನೋ ಉಳಿಸಿಕೊಳ್ಳಬಹುದಿತ್ತು ಎಂದು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಆನ್​ಲೈನ್ ಮನಿ ಗೇಮಿಂಗ್ ನಿಷೇಧಿಸುವ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಅಸ್ತು ಎಂದಿದ್ದು, ಈಗ ರಾಷ್ಟ್ರಪತಿಗಳ ಅಂಕಿತವಷ್ಟೇ ಬಾಕಿ. ಮೋಸದ ದೊಡ್ಡ ಜಾಲದ ವಿರುದ್ಧ ನಿರ್ಣಾಯಕ ಸಮರ ಸಾರಲಾಗಿದ್ದು, ಈ ಪಿಡುಗು ಮತ್ತೊಂದು ರೂಪದಲ್ಲಿ ತಲೆಎತ್ತದಂತೆ ಎಚ್ಚರಿಕೆ ವಹಿಸಬೇಕಿದೆ.

ಆನ್​ಲೈನ್ ಮನಿ ಗೇಮಿಂಗ್ ಸೃಷ್ಟಿಸಿರುವ ವಿತ್ತೀಯ ನಷ್ಟ, ಜೀವಹಾನಿ ಅಷ್ಟಿಷ್ಟಲ್ಲ. ಈ ಗಂಭೀರ ಪಿಡುಗಿನ ವಿರುದ್ಧ ದೇಶದ ನ್ಯಾಯಾಲಯಗಳು ಕೂಡ ಎಚ್ಚರಿಕೆ ನೀಡಿದ್ದವು. ಕೊನೆಗೂ, ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು, ಮಸೂದೆ ರೂಪಿಸಿದ್ದು, ಸಂಸತ್ತಿನ ಅಂಗೀಕಾರ ದೊರೆತಿದೆ. ಆನ್​ಲೈನ್ ಮನಿ ಗೇಮ್ಳಲ್ಲಿ ತೊಡಗಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 1 ಕೋಟಿಯವರೆಗೂ ದಂಡ ವಿಧಿಸುವ ಅವಕಾಶ ಹೊಸ ಕಾನೂನಿಗೆ ಇರುತ್ತದೆ. ಆನ್​ಲೈನ್ ಮನಿ ಗೇಮ್ ಕುರಿತ ಜಾಹೀರಾತು ಮಾಡಿದ್ದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಮನಿ ಗೇಮ್ಸ್​ಗಾಗಿ ಹಣ ವರ್ಗಾವಣೆಯ ಸೌಲಭ್ಯ ಕಲ್ಪಿಸಿದ್ದಲ್ಲಿ 3 ವರ್ಷಗಳ ಕಾರಾಗೃಹ ವಾಸ, 1 ಕೋಟಿ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ದೇಶದಲ್ಲಿ ಮನಿ ಗೇಮಿಂಗ್​ನಲ್ಲಿ ತೊಡಗುವವರ ಪೈಕಿ ಶೇಕಡ 47ರಷ್ಟು ಜನರು 18-30 ವಯೋಮಾನದವರು ಎಂಬುದು ಗಮನಾರ್ಹ. ಇವರನ್ನು ಬೆಟ್ಟಿಂಗ್ ಕೂಪದಿಂದ ಆಚೆ ತರಲು ಈ ನಿರ್ಣಯ ಸಹಕಾರಿ. ಸಾಲಸೋಲ ಮಾಡಿ ಯುವಕರು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದ್ದರು. ಎಷ್ಟೋ ಜನರು ಇದರಿಂದ ಹೊರಬರಲಾಗದೆ ಆತ್ಮ ಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಗೇಮಿಂಗ್ ಇಂಡಸ್ಟ್ರಿಯಲ್ಲಿ ಮನಿ ಗೇಮಿಂಗ್​ನ ಪಾಲು ಶೇ. 85ರಷ್ಟಿದ್ದು, ಭಾರತದಲ್ಲಿ 60 ಕೋಟಿ ಬಳಕೆದಾರರಿದ್ದಾರೆ. ಇನ್ಮುಂದೆ ಡ್ರೀಮ್ಸ್​ 11ನಂಥ ಆನ್​ಲೈನ್ ಗೇಮ್ಸ್​ ಮೇಲೆ ಟೀಂ ಕಟ್ಟುವಂತಿಲ್ಲ. ಹಾಗೆ ಮಾಡಿದರೆ ಜೈಲು ಶಿಕ್ಷೆ ಮತ್ತು ದಂಡ ಕಟ್ಟಿಟ್ಟ ಬುತ್ತಿ. ಬೆಟ್ಟಿಂಗ್​ನಲ್ಲಿ ಕಪ್ಪು ಹಣದ ಚಲಾವಣೆಯೂ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಮತ್ತು ಇಂಥ ಹಣ ಸಮಾಜವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುವ ಅಪಾಯವೂ ಇದೆ.

ದಿಟ್ಟ ನಿರ್ಧಾರ

ಆನ್​ಲೈನ್ ಆಟಗಳಿಂದಾಗಿ ಸರ್ಕಾರಗಳಿಗೆ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ವಾರ್ಷಿಕವಾಗಿ ದೊಡ್ಡ ಮೊತ್ತದ ಆದಾಯ ಬರುತ್ತಿದೆ. ಈ ಕಾರಣಕ್ಕಾಗಿಯೇ ಕಠಿಣ ನಿಲುವು ತಳೆಯುತ್ತಿಲ್ಲ ಎಂಬ ಆರೋಪವಿತ್ತು. ಆದರೆ, ಕೇಂದ್ರ ಸರ್ಕಾರ ಸಮಸ್ಯೆಯ ಗಂಭೀರತೆಯನ್ನು ಅರಿತು ದಿಟ್ಟ ನಿರ್ಧಾರ ಕೈಗೊಂಡಿರುವುದು ಸೂಕ್ತವಾಗಿಯೇ ಇದೆ. ಇನ್ನು ರಾಜ್ಯ ಸರ್ಕಾರಗಳು ಕೂಡ ಇದೇ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಂಡರೆ ಮನಿ ಗೇಮಿಂಗ್ ಎಂಬ ಪಿಡುಗಿನ ವಿರುದ್ಧ ಪರಿಣಾಮಕಾರಿ ಅಸ್ತ್ರ ಪ್ರಯೋಗಿಸಿದಂತಾಗುತ್ತದೆ. ತಮಿಳುನಾಡು ಸರ್ಕಾರ ಈಗಾಗಲೇ ರಿಯಲ್ ಮನಿ ಗೇಮ್ಸ್​ (ಆರ್​ಎಂಜಿ)ಗಳನ್ನು ನಿಷೇಧಿಸಿ, ಕಠಿಣ ನಿಯಮಗಳನ್ನು ರೂಪಿಸಿದೆ. ಆನ್​ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆಪ್​ಗಳ ಬಗ್ಗೆ ತನಿಖೆಗಾಗಿ ತೆಲಂಗಾಣ ಸರ್ಕಾರ ವಿಶೇಷ ತನಿಖಾ ದಳ (ಎಸ್​ಐಟಿ) ರೂಪಿಸಿದೆ.

ಹಣ ಮಾಡುವ ಧಾವಂತದಲ್ಲಿ ಹದಿಹರೆಯದವರು ಮತ್ತು ತರುಣರು ಆನ್​ಲೈನ್ ಮನಿ ಗೇಮಿಂಗ್​ನ ಜಾಲದಲ್ಲಿ ಸಿಲುಕುತ್ತಿದ್ದಾರೆ. ಇದರಿಂದ ಅವರಲ್ಲಿ ಖಿನ್ನತೆ, ಚಿಂತೆ, ಆತಂಕ ಹೆಚ್ಚುತ್ತಿದೆ. ಆನ್​ಲೈನ್ ಮನಿ ಗೇಮಿಂಗ್ ಹಾವಳಿಯಿಂದ ಕೆಳ ಮಧ್ಯಮ ಮತ್ತು ಮಧ್ಯಮವರ್ಗದ ಯುವಕರು ಹೆಚ್ಚು ಹಾನಿ ಅನುಭವಿಸುತ್ತಿದ್ದಾರೆ. ಹಾಗಾಗಿ, ಇದನ್ನು ತಡೆಯಲು ಕೂಡಲೇ ಪರಿಣಾಮಕಾರಿ ಕಾನೂನು ರಚನೆಯಾಗಬೇಕು.

| ಅಲಹಾಬಾದ್ ಹೈಕೋರ್ಟ್ (2025ರ ಮೇನಲ್ಲಿ ಹೇಳಿದ್ದು)

60 ಕೋಟಿ ಜನರು ವ್ಯಸನಿಗಳು

ಇಂಡಿಯಾ ಬ್ರ್ಯಾಂಡೆಡ್​ ಈಕ್ವಿಟಿ ಫೌಂಡೇಶನ್​ನ ತಾಜಾ ವರದಿಯ ಪ್ರಕಾರ ದೇಶದಲ್ಲಿ 60 ಕೋಟಿ ಜನರು ಆನ್​ಲೈನ್ ಆಟಗಳಿಗೆ ದಾಸರಾಗಿದ್ದಾರೆ. ಇದು ಬರೀ ಮನರಂಜನೆಗೆ ಆಡುವ ಆಟವಲ್ಲ. ಬೇಗ ಹಣ ಮಾಡಬೇಕು, ಐಷಾರಾಮಿ ಜೀವನ ಸಾಗಿಸಬೇಕು ಎಂಬ ಭ್ರಮೆಯಲ್ಲಿ ಗೇಮಿಂಗ್ಸ್ ಆಪ್​ಗಳಲ್ಲಿ ದುಡ್ಡು ತೊಡಗಿಸಿ ಆಡುವ ಅಪಾಯಕಾರಿ ಆಟ. ದುಡ್ಡು ಮಾಡುವುದರಿರಲಿ, ದಿನದಿಂದ ದಿನಕ್ಕೆ ಸಾಲದ ಪ್ರಮಾಣ ಹೆಚ್ಚುತ್ತ ಹೋಗಿ, ಕೊನೆಗೊಮ್ಮೆ ಅದು ಕುತ್ತಿಗೆಯವರೆಗೂ ಬಂದಾಗ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚುತ್ತಲೇ ಇವೆ. ಮಕ್ಕಳು ಈ ಬಗೆಯ ಜೂಜಿಗೆ ದಾಸರಾಗಿರುವುದು ಬಹುತೇಕ ಪ್ರಕರಣಗಳಲ್ಲಿ ತಂದೆ-ತಾಯಿಗೆ ಗೊತ್ತಿರುವುದೇ ಇಲ್ಲ. ಸಾಲದ ಮೊತ್ತ ಹಲವು ಲಕ್ಷ ದಾಟಿದಾಗ ಮನೆಯ ಸದಸ್ಯರು ಏನೂ ಮಾಡದಂಥ ಅಸಹಾಯಕ ಸ್ಥಿತಿ. ಹಾಗಾಗಿ, ಕೊನೆಗೆ ಯುವಕರು ಸಾವಿನ ದಾರಿ ತುಳಿಯುತ್ತಿದ್ದು, ‘ಈ ಮೋಸದಾಟಕ್ಕೆ ನೀವು ಬಲಿಯಾಗಬೇಡಿ’ ಎಂಬ ಸಂದೇಶವನ್ನು ಸಾಯುವ ಮುನ್ನ ನೀಡುತ್ತಿದ್ದಾರೆ. ಮಧ್ಯಮವರ್ಗದ ಮತ್ತು ಗ್ರಾಮೀಣ ಭಾಗದ ಯುವಕರು ಈ ಗೇಮಿಂಗ್ ಬಲೆಗೆ ಸಿಲುಕೊಂಡಿದ್ದು, ಹೊರಬರಲಾರದೆ ಒದ್ದಾಡುತ್ತಿದ್ದಾರೆ.

ಏನಿದು ಆಟ?

ರಿಯಲ್ ಮನಿ ಗೇಮ್ ಎಂದರೆ ಬಳಕೆದಾರರೊಬ್ಬರು ನಗದು ಅಥವಾ ಇತರ ರೂಪದಲ್ಲಿ ಹಣವನ್ನು ಠೇವಣಿ ಇಟ್ಟು, ಆ ಮೊತ್ತದಿಂದ ಲಾಭ ಗಳಿಸುವ ಉದ್ದೇಶದಿಂದ ಆನ್​ಲೈನ್​ನಲ್ಲಿ ಆಡುವ ಆಟ. ಇಲ್ಲಿ ಲಾಭ ಎಂದರೆ ಬಹುಮಾನ ಅಥವಾ ನಗದು.

ವರ್ಷಕ್ಕೆ 20 ಸಾವಿರ ಕೋಟಿ ರೂ. ನಷ್ಟ

60 ಕೋಟಿ ಜನರು ಆನ್​ಲೈನ್ ಮನಿ ಗೇಮಿಂಗ್​ನಲ್ಲಿ ವರ್ಷಕ್ಕೆ ಕಡಿಮೆ ಎಂದರೂ 20 ಸಾವಿರ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆನ್​ಲೈನ್ ಗೇಮಿಂಗ್ ಮಾರುಕಟ್ಟೆ ಪ್ರಸ್ತುತ 34,000 ಕೋಟಿ ರೂ.ಗಳದ್ದಾಗಿದ್ದು, 2029ರವರೆಗೆ 80 ಸಾವಿರ ಕೋಟಿ ರೂ.ಗೆ ತಲುಪಲಿದೆ ಎನ್ನುತ್ತವೆ ಮೂಲಗಳು.

ಕಹಿ ಘಟನೆಗಳು

  • ಆನ್​ಲೈನ್ ಮನಿ ಗೇಮ್ ಆಡದಂತೆ ಮನೆಯವರು ತಿಳಿಹೇಳಿದ್ದಕ್ಕಾಗಿ 21 ವರ್ಷದ ಕಾಲೇಜ್ ವಿದ್ಯಾರ್ಥಿ ಸೂರ್ಯಕಾಂತ್ ಸೇಥಿ ತನ್ನ ತಂದೆ, ತಾಯಿ ಮತ್ತು ಸಹೋದರಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ ಒಡಿಶಾದ ಜಗತ್​ಸಿಂಗ್​ಪುರದಲ್ಲಿ ಇದೇ ವರ್ಷದ ಮಾರ್ಚ್ 4ರಂದು ನಡೆದಿತ್ತು. ತಲೆಮರೆಸಿಕೊಂಡ ಆರೋಪಿಯನ್ನು ಬಳಿಕ ಪೊಲೀಸರು ಬಂಧಿಸಿದರು.
  • ಆನ್​ಲೈನ್ ಮನಿ ಗೇಮ್ಲ್ಲಿ ಹಣ ಕಳೆದುಕೊಂಡು, ಮುಂದಿನ ದಾರಿ ಕಾಣದೆ ಮನನೊಂದ 23 ವರ್ಷದ ಯುವಕ ರಾಕೇಶ್ ಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇದೇ ವರ್ಷದ ಜನವರಿ 19ರಂದು ಸಂಭವಿಸಿತ್ತು. ಬೆಟ್ಟಿಂಗ್​ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಈತ ಡೆತ್​ನೋಟ್​ನಲ್ಲಿ, ‘ಆನ್​ಲೈನ್ ಗೇಮ್ ನಿಷೇಧಿಸಬೇಕು. ಯಾರೂ ಈ ಗೇಮ್ ಆಡಬೇಡಿ’ ಎಂದು ಬರೆದು, ತಾಯಿಯ ಕ್ಷಮೆ ಕೋರಿದ್ದ.
  • ಆನ್​ಲೈನ್ ಮನಿ ಗೇಮ್ಸ್​ನಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದ 24 ವರ್ಷ ವಯಸ್ಸಿನ ಯುವಕ ವಿಜಯಕುಮಾರ ಹೊಳ್ಳೆ 2024ರ ಡಿಸೆಂಬರ್​ನಲ್ಲಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಸಾಯಂಗಾವ ಬಳಿಯ ಜ್ಯೋತಿತಾಂಡಾದ ಸಮೀಪ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿ, ‘ಆನ್​ಲೈನ್ ಗೇಮ್್ಸ ಆಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾರೂ ಅದರ ದಾಸರಾಗಬೇಡಿ. ಸರ್ಕಾರ ಇದನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದ್ದ. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ತ್ಯಜಿಸಿದ.
  • ಗೇಮಿಂಗ್ ಆಪ್​ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡು, ಆರ್ಥಿಕ ಸಂಕಷ್ಟ ತಾಳಲಾರದೆ 25 ವರ್ಷದ ಯುವಕ ಮಲ್ಲಿಕಾರ್ಜುನ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಜನವರಿ 12ರಂದು ಸಂಭವಿಸಿತ್ತು.

ಮಸೂದೆಗೆ ಸಂಸತ್ ಅಂಗೀಕಾರ

ಎಲ್ಲ ಥರದ ಆನ್​ಲೈನ್ ಮನಿ ಗೇಮ್ಸ್​ ಹಾಗೂ ಅವುಗಳನ್ನು ಉತ್ತೇಜಿಸುವ ಇ-ಸ್ಪೋರ್ಟ್ಸ್ ಮತ್ತು ಆನ್​ಲೈನ್ ಸೋಷಿಯಲ್ ಗೇಮಿಂಗ್​ಗಳನ್ನು ನಿಷೇಧಿಸುವ ಮಹತ್ವದ ಮಸೂದೆಗೆ ಸಂಸತ್ ಅನುಮೋದನೆ ಲಭಿಸಿದೆ. ರಾಜ್ಯಸಭೆಯಲ್ಲಿ ಗುರುವಾರ ಗದ್ದಲದ ನಡುವೆಯೂ ಚರ್ಚೆ ಇಲ್ಲದೆ ಅದಕ್ಕೆ ಅಂಗೀಕಾರ ನೀಡಲಾಗಿದೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿತ್ತು. ಆನ್​ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025ಅನ್ನು ಮೇಲ್ಮನೆಯಲ್ಲಿ ಮಂಡಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಈ ಶಾಸನವು ಆನ್​ಲೈನ್ ಗೇಮಿಂಗ್ ವಿಭಾಗದ ಮೂರನೇ ಎರಡರಷ್ಟು ಭಾಗವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು. ಸಮಾಜಕ್ಕೆ ಅದರಲ್ಲೂ ಮಧ್ಯಮ ವರ್ಗದ ಯುವ ಜನತೆಗೆ ದೊಡ್ಡ ಸಮಸ್ಯೆ ಆಗಿರುವ ಆನ್​ಲೈನ್ ಗೇಮ್ಳನ್ನು ಈ ಶಾಸನ ನಿಷೇಧಿಸಲಿದೆ ಎಂದು ಅವರು ವಿವರಿಸಿದರು. ಇದು ಗೀಳಾಗಿ ಪರಿವರ್ತನೆಯಾಗಿದ್ದು, ಕುಟುಂಬಗಳು ಉಳಿತಾಯವನ್ನು ಕಳೆದುಕೊಳ್ಳುವಂತಾಗಿದೆ ಎಂದು ಸಚಿವರು ಈ ಶಾಸನದ ಅನಿವಾರ್ಯತೆಯನ್ನು ಪ್ರತಿಪಾದಿಸಿದರು.