ಶಿವಮೊಗ್ಗ: ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಂಬಂಧ ಎಸ್ಪಿ ಹಂತದಲ್ಲಿ ನೀಡುತ್ತಿರುವ ಸೂಚನೆಗಳಿಗೂ ಕೆಳ ಹಂತದಲ್ಲಿ ಠಾಣಾಧಿಕಾರಿಗಳು ಹೇಳುತ್ತಿರುವ ಮಾರ್ಗಸೂಚಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟೊಂದು ನಿರ್ಬಂಧದ ನಡುವೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುವುದು ಕಷ್ಟಸಾಧ್ಯ ಎಂದು ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಸಭಾ ಭವನ, ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಅಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು. ಕೇಸರಿ ಧ್ವಜ, ಬಂಟಿಂಗ್ಸ್ ಹಾಕುವಂತಿಲ್ಲ ಎಂದು ನಿರ್ಬಂಧ ವಿಧಿಸುತ್ತಿರುವುದು ಸರಿಯಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಣೇಶ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ಮಂಗಳವಾದ್ಯಗಳ ಮೆರವಣಿಗೆಗೆ ಅವಕಾಶ ನೀಡಬೇಕು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಯೂ ಇಷ್ಟೇ ಎತ್ತರ ಇರಬೇಕು ಎಂದು ನಿರ್ಬಂಧಿಸುವುದು ಸರಿಯಲ್ಲ. ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಅನೇಕ ಸಮಿತಿಗಳಿಗೆ ಹಣಕಾಸಿನ ತೊಂದರೆ ಇರುತ್ತದೆ. ಅಂತಹ ಸಮಿತಿಗಳು ಸಿಸಿ ಕ್ಯಾಮರಾ ಅಳವಡಿಸುವುದು ಹೇಗೆ ಸಾಧು ಎಂದು ಪ್ರಶ್ನಿಸಿದರು.
ವಿಎಚ್‌ಪಿ ಹಲವು ದಶಕಗಳಿಂದ ಗಣೇಶೋತ್ಸವದ ಮುನ್ನೆಲೆಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದೆ. ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಈಗ ಪೊಲೀಸರು ಗಣೇಶೋತ್ಸವಕ್ಕೆ ಸೂಕ್ತ ಸಹಕಾರ ನೀಡಬೇಕು. ಅನಗತ್ಯ ನಿರ್ಬಂಧಗಳನ್ನು ವಿಧಿಸಬಾರದು ಎಂದು ಆಗ್ರಹಿಸಿದರು.
ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ನಾರಾಯಣ್ ಜಿ.ವರ್ಣೇಕರ್, ಬಜರಂಗದಳ ಜಿಲ್ಲಾ ಸಂಯೋಜಕ ರಾಘವನ್ ವಡಿವೇಲು, ನಗರ ಸಂಯೋಜಕ ನಾಗೇಶ್ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.