ನ್ಯೂಸ್

ಹೋಟೆಲಲ್ಲಿ ಬಲವಂತದ ಟಿಪ್ಸ್ ನಿಷೇಧ

Webdesk - Ravikanth

ನವದೆಹಲಿ: ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಗ್ರಾಹಕರ ಬಿಲ್​ನಲ್ಲಿ ಬಲವಂತದಿಂದ ಸೇವಾ ಶುಲ್ಕ ವಿಧಿಸುವುದನ್ನು ಸರ್ಕಾರ ನಿಷೇಧಿಸಿದೆ. ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಈ ಸಂಬಂಧ ಆದೇಶವೊಂದನ್ನು ಹೊರಡಿಸಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಸೇವಾ ಶುಲ್ಕ ಅಥವಾ ಬಲವಂತದ ಟಿಪ್ಸ್ ವಿಧಿಸುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿರುವುದರಿಂದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.

ಸೇವಾ ಶುಲ್ಕ ವಿಧಿಸದಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಹಿಂದೆ ರೆಸ್ಟೋರೆಂಟ್ ಮತ್ತು ಹೋಟೆಲ್​ಗಳಿಗೆ ಸೂಚಿಸಿದ್ದಾಗ ಗೊಂದಲ ಉಂಟಾಗಿತ್ತು. ಆಗ ಯಾವುದೇ ಸ್ಪಷ್ಟ ಮಾರ್ಗಸೂಚಿಯೂ ಇರಲಿಲ್ಲ. ಈ ಸಂಬಂಧ ಕಾನೂನು ರೂಪಿಸುವವರೆಗೆ ಸೇವಾ ಶುಲ್ಕ ‘ಕಾನೂನುಬದ್ಧ’ ಎಂದು ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (ಎನ್​ಆರ್​ಎಐ) ವಾದಿಸಿತ್ತು.

ದೂರಿಗೆ ಅವಕಾಶ: ಇತ್ತೀಚಿನ ಮಾರ್ಗಸೂಚಿ ಸ್ಪಷ್ಟವಾಗಿದ್ದು ಸೇವಾ ಶುಲ್ಕ ವಿಧಿಸಿದಲ್ಲಿ ರಾಷ್ಟ್ರೀಯ ಗ್ರಾಹಕ ಹೆಲ್ಪ್​ಲೈನ್​ನಲ್ಲಿ (ಎನ್​ಸಿಎಚ್) ದೂರು ಸಲ್ಲಿಸಲು ಗ್ರಾಹಕರಿಗೆ ಹಕ್ಕಿದೆ ಎಂದು ತಿಳಿಸಿದೆ. ತ್ವರಿತ ಹಾಗೂ ದಕ್ಷ ಪರಿಹಾರಕ್ಕಾಗಿ ಸಂತ್ರಸ್ತ ಗ್ರಾಹಕರು ಇ-ದಾಖಿಲ್ ಪೋರ್ಟಲ್ ಮೂಲಕವೂ ದೂರನ್ನು ದಾಖಲಿಸಬಹುದಾಗಿದೆ.

ಹೋಟೆಲ್ ಅಥವಾ ರೆಸ್ಟೋರೆಂಟ್​ಗಳು ಬಿಲ್​ಗಳಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕವನ್ನು ಸೇರಿಸಬಾರದು ಎಂದು ಮಾರ್ಗಸೂಚಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಬೇರೆ ಯಾವ ಹೆಸರಿನಲ್ಲೂ ಸೇವಾ ಶುಲ್ಕವನ್ನು ಸಂಗ್ರಹಿಸಬಾರದು ಎಂಧು ತಿಳಿಸಿದೆ. ಸೇವಾ ಶುಲ್ಕ ಹೇರಿಕೆ ಆಧಾರದಲ್ಲಿ ಗ್ರಾಹಕರಿಗೆ ಪ್ರವೇಶವನ್ನು ನಿಷೇಧಿಸುವಂತಿಲ್ಲ ಎಂದೂ ಆದೇಶ ತಿಳಿಸಿದೆ.