ನ್ಯೂಸ್

ಕಣ್ಣೀರಿಟ್ಟ ನಟ ಅನಿರುದ್ಧ್… ಕೊನೆಗೆ ಕ್ಷಮೆ ಕೇಳಿದ್ದೇಕೆ?

ಬೆಂಗಳೂರು: ಕೊನೆಗೂ ಬಹಳ ದಿನಗಳಿಂದ ವಿವಾದಕ್ಕೊಳಗಾಗಿದ್ದ ನಟ ಅನಿರುದ್ಧ್​ ಬ್ಯಾನ್​ ಪ್ರಕರಣ ಸುಖಾಂತ್ಯ ಕಂಡಿದೆ. 'ಜೊತೆ ಜೊತೆಯಲಿ' ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್​ ಅವರ ನಡುವೆ ಪ್ರಕರಣ ಬಗೆಹರಿದಿದ್ದು, ಮುಂದೆ ಯಾವುದೇ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅನಿರುದ್ಧ್​ ನಟಿಸಬಹುದಾಗಿದೆ.

ಆರೂರು ಜಗದೀಶ್​ ನಿರ್ದೇಶನದ 'ಜೊತೆ ಜೊತೆಯಲಿ' ಧಾರಾವಾಹಿಯ ತಂಡದೊಂದಿಗೆ ವೈಮನಸ್ಯ ಉಂಟಾದ ಕಾರಣ ಅನಿರುದ್ಧ್​, ಆ ತಂಡದಿಂದ ಕೆಲವು ತಿಂಗಳುಗಳ ಹಿಂದೆ ಹೊರಬಂದಿದ್ದರು. ಈ ಪ್ರಕರಣವು ಕಿರುತೆರೆ ನಿರ್ಮಾಪಕರ ಸಂಘದ ಮಟ್ಟಿಲೇರಿ, ಅನಿರುದ್ಧ್​ ಅವರಿಗೆ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ತೀರ್ಮಾನವಾಗಿತ್ತು. ಹೀಗಿರುವಾಗಲೇ, ಉದಯ ಟಿವಿಯಲ್ಲಿ ಪ್ರಸಾರವಾಗಬೇಕಿರುತವ 'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್​ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಕಿರುತೆರೆ ನಿರ್ಮಾಪಕರ ಸಂಘವು ವಿರೋಧ ವ್ಯಕ್ತಪಡಿಸಿದ್ದು, ಅನಿರುದ್ಧ್​ ಅವರಿಗೆ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿತ್ತು. ಈ ಪ್ರಕರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯ ಅಂಗಳಕ್ಕೆ ಹೋಗಿ, ಕಳೆದ ಎರಡು ದಿನಗಳಿಂದ ಅಲ್ಲಿ ಚರ್ಚೆ ನಡೆದಿತ್ತು. ಈ ಸಭೆಗೆ 'ಜೊತೆ ಜೊತೆಯಲಿ' ಚಿತ್ರತಂಡ ಮತ್ತು ಕಿರುತೆರೆ ನಿರ್ಮಾಪಕರ ಸಂಘದವರಾಗಲೀ ಹಾಜರಾಗಿರಲಿಲ್ಲ. ಅದಕ್ಕೆ ಪ್ರತಿಯಾಗಿ ಎರಡೂ ಸಂಘಗಳು ಪ್ರತ್ಯೇಕವಾಗಿ ಸಭೆ ನಡೆಸಿದ್ದವು. ಈ ಸಭೆಯಲ್ಲಿ ಅನಿರುದ್ಧ್​ ಸಹ ಭಾಗವಹಿಸಿದ್ದು, ಪ್ರಕರಣ ಇತ್ಯರ್ಥವಾಗಿದೆ.

ಸಭೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದ ನಿರ್ದೇಶಕ ಶೇಷಾದ್ರಿ, 'ಚಿತ್ರೀಕರಣ ಸಂದರ್ಭದಲ್ಲಿ ವ್ಯತ್ಯಾಸಗಳು ಆಗುವುದು ಸಹಜ. ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ಇದಕ್ಕೆ ಜಗದೀಶ್ ಹಾಗೂ ಅನಿರುದ್ಧ್​ ಒಪ್ಪಿಕೊಂಡಿದ್ದಾರೆ. ಇಬ್ಬರೂ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾರೆ. ಈ ಹಿಂದೆ ಆಗಿರುವ ಘಟನೆ ಮರೆತು ಮುಂದೆ ಸಾಗಬೇಕು. ಇದು ನಮ್ಮ ಮನೆಯ ವಿಷಯ. ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೂ ಚಿತ್ರರಂಗಕ್ಕೂ ಸಂಬಂಧ ಇಲ್ಲ' ಎಂದು ಹೇಳಿದ್ದಾರೆ.

ಆರೂರು ಜಗದೀಶ್ ಹೆಗಲ ಮೇಲೆ ಕೈ ಹಾಕಿ ಭಾವುಕರಾದ ಅನಿರುದ್ಧ್​, 'ಈ ಘಟನೆಯಿಂದ ಧಾರಾವಾಹಿಯ ಅಭಿಮಾನಿಗಳಿಗೆ ರಸಭಂಗ ಆಗಿದೆ. ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇಂತಹ ಘಟನೆ ನಡೆಯಬಾರದಾಗಿತ್ತು' ಎಂದು ಭಾವುಕರಾದರು.

ಆರೂರು ಜಗದೀಶ್​ ಸಹ ಕ್ಷಮೆ ಕೇಳಿ, ''ಜೊತೆ ಜೊತೆಯಲಿ' ಧಾರವಾಹಿಗೆ ಹೀಗೆ ಆಗಬಾರದಿತ್ತು. ಮೂರು ವರ್ಷಗಳ ಅವರ ಜತೆಗೆ ಕೆಲಸ ಮಾಡಿದ್ದೇನೆ. ಧಾರಾವಾಹಿಯ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಅನಿರುದ್ಧ್​ ಅವರಿಗೆ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅನಿರುದ್ಧ್​ ಅವರ ಜತೆಗೆ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆಗೆ, ಕಾಲವೇ ಉತ್ತರಿಸುತ್ತದೆ' ಎಂದು ಹೇಳಿದ್ದಾರೆ.