ನ್ಯೂಸ್

ಬಮುಲ್‌ನಲ್ಲೂ ಹಾಲು-ನೀರು ಅಕ್ರಮ : ವನ್‌ಮುಲ್ ಗುತ್ತಿಗೆದಾರನಿಂದ ಬಮುಲ್‌ಗೆ ಹಾಲು ಸರಬರಾಜು ಆರೋಪಿ ಪರವಾನಗಿ ರದ್ದು

Ramanagara

ರಾಮನಗರ : ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಮನ್‌ಮುಲ್) ನಡೆದಿದೆ ಎನ್ನಲಾದ ಅವ್ಯವಹಾರ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಅಲ್ಲಿ ಹಾಲಿಗೆ ನೀರು ಮಿಶ್ರಣ ಮಾಡಿ ಬಿಎಂಸಿಗಳಿಂದ ಡೇರಿಗೆ ಸರಬರಾಜು ಮಾಡುತ್ತಿದ್ದ ವ್ಯಕ್ತಿಯೇ, ಬೆಂಗಳೂರು ಹಾಲು ಒಕ್ಕೂಟದಲ್ಲಿಯೂ ಹಾಲು ಸರಬರಾಜು ಮಾಡುವ ಗುತ್ತಿಗೆ ಪಡೆದುಕೊಂಡಿದ್ದ ಅಂಶ ಬೆಳಕಿಗೆ ಬಂದಿದೆ.

ಮನ್‌ಮುಲ್‌ನಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಘಟನೆಯಲ್ಲಿ ಹಾಲು ಸರಬರಾಜಿನ ಗುತ್ತಿಗೆ ಪಡೆದುಕೊಂಡಿದ್ದ ಇಬ್ಬರ ಪಾತ್ರ ಇರುವುದು ಕಂಡು ಬಂತು. ಈ ಗುತ್ತಿಗೆದಾರರಲ್ಲಿ ಒಬ್ಬ ಚನ್ನಪಟ್ಟಣ ತಾಲೂಕಿನವನು ಎನ್ನುವುದು ಗಮನಾರ್ಹ.

ಇದೇ ವ್ಯಕ್ತಿ ಬಮುಲ್‌ನಲ್ಲಿಯೂ ಬಿಎಂಸಿಗಳಿಂದ ಹಾಲು ಸಂಗ್ರಹಿಸಿ ಟ್ಯಾಂಕರ್ ಮೂಲಕ ಬೆಂಗಳೂರಿಗೆ ಸರಬರಾಜು ಮಾಡುವ ಗುತ್ತಿಗೆ ಪಡೆದುಕೊಂಡಿದ್ದ ಎನ್ನುವುದು ಬೆಳಕಿಗೆ ಬಂದಿದ್ದು, ಬಮುಲ್‌ನಲ್ಲಿಯೂ ಅಕ್ರಮ ನಡೆದಿರುವ ವಾಸನೆ ಮೂಡುವಂತೆ ಮಾಡಿದೆ.

ಮತ್ತಷ್ಟು ಬಿಗಿ ಕ್ರಮ ಅನಿವಾರ್ಯ: ಸದ್ಯಕ್ಕೆ ಬಮುಲ್ ಅಧಿಕಾರಿಗಳ ಮಾಹಿತಿಯಂತೆ ಯಾವುದೇ ಅಕ್ರಮ ನಡೆಯುತ್ತಿಲ್ಲ. ಇದನ್ನು ತಡೆಗಟ್ಟುವ ಸಲುವಾಗಿಯೇ ವಿವಿಧ ಹಂತಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ, ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೆ ತಪಾಸಣೆ ನಡೆಯುವುದರಿಂದ ಅಕ್ರಮ ನಡೆಯುವ ಪ್ರಮಾಣ ತೀರಾ ಕಡಿಮೆ ಎನ್ನುತ್ತಿದ್ದಾರೆ.

ಇದರ ಹೊರತಾಗಿಯೂ ಎಂಪಿಸಿಎಸ್‌ಗಳಿಂದ ಬಿಎಂಸಿಗೆ (ಬಲ್ಕ್ ಮಿಲ್ಕ್ ಕೂಲರ್), ನಂತರ ದೊಡ್ಡ ಡೇರಿಗಳು ಇಲ್ಲವೇ ಹಾಲು ಉತ್ಪನ್ನಗಳ ಉತ್ಪಾದನಾ ಘಟಕಕ್ಕೆ ಹಾಲು ಸರಬರಾಜು ಮಾಡುವ ವಾಹನಗಳ ಮೇಲೆ ಹೆಚ್ಚಿನ ನಿಗಾ ಇಡಬೇಕಿದೆ.

ಗುತ್ತಿಗೆ ರದ್ದು : ಮಂಡ್ಯದಲ್ಲಿ ಸಿಕ್ಕಿಬಿದ್ದಿರುವ ಚನ್ನಪಟ್ಟಣ ಮೂಲದ ಗುತ್ತಿಗೆದಾರನ ನಡವಳಿಕೆ ಮೇಲೆ ಅನುಮಾನ ಮೂಡಿದ ಕಾರಣದಿಂದ ಕಳೆದ 6 ತಿಂಗಳ ಹಿಂದೆಯೇ ಹಾಲು ಸಂಗ್ರಹಿಸಿ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದ ಚನ್ನಪಟ್ಟಣದ ಎರಡು ಮಾರ್ಗಗಳನ್ನು ರದ್ದುಪಡಿಸಿ, ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬಿಎಂಸಿಗಳಿಂದ ಬೆಂಗಳೂರು ಡೇರಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕಕ್ಕೆ ತಡವಾಗಿ ವಾಹನಗಳು ಬರುತ್ತಿದ್ದ ಅನುಮಾನದ ಮೇಲೆ ಈ ವಾಹನಗಳ ಪರವಾನಗಿಯನ್ನು ಬಮುಲ್ ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಘಕ್ಕೆ ಆಪತ್ತು : ಬಮುಲ್‌ನಲ್ಲಿಯೂ ಆಗಾಗ್ಗೆ ಅಕ್ರಮದ ಮಾತುಗಳು ಕೇಳಿ ಬರುತ್ತಿವೆಯಾದರೂ ಭಾರಿ ಪ್ರಮಾಣದಲ್ಲಿ ಸುದ್ದಿ ಆಗಲಿಲ್ಲ. ಆದರೆ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಬಮುಲ್‌ನಲ್ಲಿಯೂ ಇಂತಹ ಘಟನೆಗಳು ನಡೆದಿವೆಯೇ, ನಡೆಯುತ್ತಿವೆಯೇ ಎನ್ನುವ ಚರ್ಚೆಗಳು ಆರಂಭಗೊಂಡಿವೆ.

ಇರುವ ಹುಳುಕುಗಳಿಗೆ ತೇಪೆ ಹಾಕಿ ಮುಚ್ಚುವ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ಇದರ ಜತೆಗೆ ಹಾಲು ರೈತನಿಂದ ಪೂರೈಕೆ ಆಗುವ ಹಂತದಿಂದ ಆರಂಭಗೊಂಡು ಉತ್ಪನ್ನಗಳ ಉತ್ಪಾದನಾ ಘಟಕಗಳಿಗೆ ಬರುವವರೆಗೂ ಸಂಪೂರ್ಣ ನಿಗಾ ಇಡುವ ಅಗತ್ಯವಿದೆ. ಅಲ್ಲದೆ, ಎಂಪಿಸಿಎಸ್ ಹಂತದಲ್ಲಿಯೂ ಹಾಲಿಗೆ ನೀರು ಮಿಶ್ರಣ ಮಾಡಲಾಗುತ್ತದೆ ಎನ್ನುವ ಆರೋಪವಿದ್ದು, ಇದನ್ನು ಬಮುಲ್ ಸರಿಪಡಿಸುವ ಕೆಲಸ ಮಾಡಬೇಕಿದೆ. ಇಲ್ಲವಾದರೆ ಸಂಘಗಳ ಅಸ್ತಿತ್ವಕ್ಕೆ ಧಕ್ಕೆ ಬರುವುದು ಖಂಡಿತ

ಬೆಂಬಲಕ್ಕೆ ನಿಂತವರು ಯಾರು? ಮನ್‌ಮುಲ್ ಮತ್ತು ಬಮುಲ್ ಎರಡರಲ್ಲೂ ಹಾಲಿನ ಸರಬರಾಜು ಗುತ್ತಿಗೆ ಪಡೆದುಕೊಂಡು ಅಕ್ರಮ ನಡೆಸಿರುವ ವ್ಯಕ್ತಿಯನ್ನು ರಕ್ಷಿಸುವ ಕಾರ್ಯದಲ್ಲಿ ದೊಡ್ಡಮಟ್ಟದ ರಾಜಕಾರಣಿಗಳ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿದೆ. ಒಕ್ಕೂಟಗಳ ನಿರ್ದೇಶಕರು ಮಾತ್ರವಲ್ಲದೆ, ರಾಜ್ಯದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರೂ ಗುತ್ತಿಗೆದಾರನ ಪರ ನಿಂತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿಯೇ ತನಿಖೆ ಜಾಡು ತಪ್ಪುವ ಸಾಧ್ಯತೆಯೂ ಇದೆ.

ಮನ್‌ಮುಲ್‌ನ ಅಕ್ರಮದಲ್ಲಿ ಭಾಗಿಯಾಗಿರುವ ಗುತ್ತಿಗೆದಾರನ ವಾಹನಗಳ ಗುತ್ತಿಗೆಯನ್ನು ಕಳೆದ 6 ತಿಂಗಳ ಹಿಂದೆಯೇ ರದ್ದುಪಡಿಸಲಾಗಿದೆ. ಯಾವುದೇ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಇದರ ಹೊರತಾಗಿಯೂ ಸಂಪೂರ್ಣ ನಂಬಿಕೆ ಮೇಲೆ ಒಕ್ಕೂಟದಲ್ಲಿ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಲ್ಲರೂ ಒಕ್ಕೂಟದ ಒಳಿತಿಗಾಗಿ ದುಡಿಯಬೇಕು. ನರಸಿಂಹಮೂರ್ತಿ ಅಧ್ಯಕ್ಷ, ಬಮುಲ್