ನ್ಯೂಸ್

ಬಾಳು-ಬೆಳಕು: ಅನಗತ್ಯ ಯೋಚನಾ ಹೊರೆಯಿಂದ ಹೊರಬರೋಣ

|ಮಹಾದೇವ ಬಸರಕೋಡ

ಅನಾದಿ ಕಾಲದಿಂದಲೂ ಬಹುತೇಕ ನಾವೆಲ್ಲ ನಮ್ಮ ಬೆನ್ನೇರಿಸಿಕೊಂಡು ಬಂದ ವ್ಯಸನವೇ ಇದು. ‘ನಾನು ಶ್ರೇಷ್ಠ, ನಾನು ಬಹಳಷ್ಟು ಬುದ್ಧಿವಂತ, ವಿಶಿಷ್ಟ ಮತ್ತು ಮೇಲ್ದರ್ಜೆಯವನು’ ಎಂದು ಬೀಗುತ್ತೇವೆ. ಜನರು ನಮ್ಮನ್ನು ಹಾಗೆ ಗುರುತಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬೇರೆಯವರ ಮೆಚ್ಚುಗೆಗಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಕಣ್ಣೆದುರಿಗಿನ ವಾಸ್ತವಗಳನ್ನೂ ಮರೆತುಬಿಡುತ್ತೇವೆ. ನಮ್ಮ ಹತೋಟಿಯ ಆಚೆಗಿರುವ ವಸ್ತುಗಳು ನಮಗೆ ಸಿಗಲಾರವು ಎಂಬ ಸಣ್ಣ ಯೋಚನೆಯನ್ನೂ ಮಾಡದೆ ಭ್ರಮಾಲೋಕದಲ್ಲಿಯೇ ವಿಹರಿಸುತ್ತೇವೆ. ತುರ್ತು ಸಂದರ್ಭಗಳಲ್ಲಿ ನಮಗೆ ಯಾವುದು ಅಗತ್ಯವಿದೆಯೋ ಅದರ ಕಡೆಗೆ ಕಾಳಜಿವಹಿಸುವುದನ್ನು ಮರೆತುಬಿಡುತ್ತೇವೆ. ಎಷ್ಟೋ ಬಾರಿ ಅನುಚಿತವಾಗಿ ವರ್ತಿಸುತ್ತೇವೆ. ಹಾಗಾಗಿ, ಬದುಕಿನ ಹಾದಿಯಲ್ಲಿ ನಮಗರಿವಿಲ್ಲದಂತೆ ನಾವೇ ಸಂಕಟಗಳನ್ನು ಬರಮಾಡಿಕೊಳ್ಳುತ್ತೇವೆ. ಇದರಿಂದ ಪಾರಾಗಲು ಒಂದಿಷ್ಟು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ.

ಸೂಫಿ ಕಥೆಯೊಂದು ಹೀಗಿದೆ: ಅದು ಆಗ ತಾನೆ ಹೊತ್ತು ಮುಳುಗಿದ ಹೊತ್ತು. ವ್ಯಾಕರಣ ಪಂಡಿತನೊಬ್ಬ ಕಾಡಿನ ದಾರಿಯ ಮೂಲಕ ತನ್ನ ಗಮ್ಯವನ್ನು ತಲುಪಬೇಕಿತ್ತು. ಒಂದಷ್ಟು ದೂರ ನಡೆದ. ಕಾಡು ದಟ್ಟವಾಗಿದ್ದರಿಂದ ಬೆಳಕು ಬಹುಬೇಗ ಕ್ಷೀಣಿಸತೊಡಗಿತು. ಆದರೆ ಆ ಪಂಡಿತ ಮಾತ್ರ ತಾನು ಗಳಿಸಿದ ವ್ಯಾಕರಣದ ಅಪಾರವಾದ ಜ್ಞಾನದ ಕುರಿತು, ತನ್ನ ಪಾಂಡಿತ್ಯದ ಕುರಿತು ಯೋಚಿಸುತ್ತ ಮುನ್ನಡೆಯುತ್ತಿದ್ದ. ‘ನನ್ನ ಅಪರಿಮಿತ ಪಾಂಡಿತ್ಯವನ್ನು ಎಲ್ಲರೂ ಗುರುತಿಸಬೇಕು. ನನ್ನನ್ನು ಗೌರವದಿಂದ ಕಾಣಬೇಕು. ನನ್ನ ಪಾಂಡಿತ್ಯವನ್ನು ಎಲ್ಲ ಜನರೆದುರು ಪ್ರದರ್ಶಿಸಬೇಕು. ಅದಕ್ಕಾಗಿ ಅವಕಾಶಗಳನ್ನು ಹುಡುಕಬೇಕು’ ಎನ್ನುವ ಲೆಕ್ಕಾಚಾರದಲ್ಲಿಯೇ ಮುಳುಗಿದ್ದ. ತನಗೆ ಗೊತ್ತಿಲ್ಲದಂತೆ ದಾರಿಯ ಪಕ್ಕದಲ್ಲಿಯೇ ಇದ್ದ ಪಾಳು ಬಾವಿಯಲ್ಲಿ ಜಾರಿ ಬಿದ್ದಾಗಲೇ ಅವನು ತನ್ನ ಯೋಚನಾಲಹರಿಯಿಂದ ಹೊರಬಂದ. ಆಗ ವಾಸ್ತವದ ಅರಿವಾಗಿತ್ತು. ಸಹಾಯಕ್ಕಾಗಿ ಕಿರುಚತೊಡಗಿದ. ಸ್ವಲ್ಪ ಸಮಯದ ನಂತರ ಅದೇ ದಾರಿಯಲ್ಲಿ ಸೂಫಿ ದರ್ವೆಶಿಯೊಬ್ಬ ಸಾಗಿ ಹೋಗುತ್ತಿದ್ದ. ಪಂಡಿತನ ಅಂಗಲಾಚುವಿಕೆ ಅವನಿಗೆ ಕೇಳಿತು. ಪಾಳು ಬಾವಿಯಲ್ಲಿ ಇಣುಕಿ ನೋಡಿದ. ಅದರಲ್ಲಿ ನೀರು ಇರಲಿಲ್ಲ. ‘ಯಾರು ಅದು? ಏನಾಯಿತು?’ ಎಂದು ಪ್ರಶ್ನಿಸಿದ ದರ್ವೆಶಿ. ‘ನಾನು ಬಹುದೊಡ್ಡ ವಿದ್ವಾಂಸ. ವ್ಯಾಕರಣದಲ್ಲಿ ಪ್ರಕಾಂಡ ಪಂಡಿತ. ಆಕಸ್ಮಿಕವಾಗಿ ಈ ಪಾಳು ಬಾವಿಯಲ್ಲಿ ಜಾರಿಬಿದ್ದೆ. ದಯವಿಟ್ಟು ನನ್ನನ್ನು ರಕ್ಷಿಸು’ ಎಂದು ಮೊರೆಯಿಟ್ಟ.

ದರ್ವೆಶಿಗೆ ಪರಿಸ್ಥಿತಿಯ ಅರಿವಾಗಿತ್ತು. ‘ಒಂದಷ್ಟು ಸಮಯ ತಡೆದುಕೋ, ತೀರಾ ಅವಸರ ಮಾಡಬೇಡ. ನಾನು ಹಗ್ಗ ಮತ್ತು ಏಣಿಯನ್ನು ತರುತ್ತೇನೆ’ ಎಂದು ನುಡಿದ. ಆಗ ಪಂಡಿತನು, ‘ಸ್ವಲ್ಪ ನಿಲ್ಲು! ನಿನಗೆ ವ್ಯಾಕರಣದ ಕುರಿತು ಗೊತ್ತಿದೆಯೇ? ನೀನು ಮಾತನಾಡುವಲ್ಲಿ ವ್ಯಾಕರಣ ದೋಷವಿದೆ. ಇದು ಭಾಷೆಗೆ ಮಾಡುವ ಅವಮಾನವಲ್ಲವೇ? ಮೊದಲು ಅದನ್ನು ತಿದ್ದಿಕೋ’ ಎಂದ ಬಾವಿಯಿಂದಲೇ. ಆಗ ದರ್ವೆಶಿ, ‘ವ್ಯಾಕರಣಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ನಿನ್ನನ್ನು ಮೇಲಕ್ಕೆ ಎತ್ತುವುದು ನನ್ನ ಆದ್ಯತೆ ಎಂದುಕೊಂಡಿದ್ದೆ. ಆದರೆ ನಿನಗೆ ವ್ಯಾಕರಣವೇ ಅತಿಮುಖ್ಯ ಎಂದೆನಿಸುತ್ತಿದೆ. ಹಾಗಾದರೆ ನೀನು ಅಲ್ಲಿಯೇ ಇರು. ನಾನು ವ್ಯಾಕರಣ ಕಲಿತುಕೊಂಡು ಮರಳಿ ಬರುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟುಹೋದ.

ನಾವು ಕೂಡ ಎಷ್ಟೋ ಬಾರಿ ಈ ವ್ಯಾಕರಣ ಪಂಡಿತನ ಹಾಗೆಯೇ ವರ್ತಿಸುತ್ತೇವೆ. ನಮ್ಮ ಹತೋಟಿಯಿಂದ ಆಚೆಯಿರುವ ಹೊಗಳಿಕೆಗೆ ಹಂಬಲಿಸುತ್ತಲೇ ವಾಸ್ತವವನ್ನು ಮರತೆಬಿಡುತ್ತೇವೆ. ವಿವೇಕವನ್ನು ದೂರಕ್ಕೆ ತಳ್ಳಿಬಿಡುತ್ತೇವೆ. ಇದು ನಿಜಕ್ಕೂ ನಮ್ಮ ಬದುಕಿನ ಹಿನ್ನಡೆಗೆ ಕಾರಣವಾಗುತ್ತದೆ.

ಅನಗತ್ಯವಾಗಿ ಸಲ್ಲದ ಸಂಗತಿಗಳಿಗೆ ಮನಸ್ಸನ್ನು ಶರಣಾಗತ ವಾಗಿಸದೇ ವಿವೇಚನೆಯನ್ನು ರೂಢಿಸಿಕೊಳ್ಳಬೇಕು. ಬೇರೆಯವರ ಕಣ್ಣಿಗೆ ಬುದ್ಧಿವಂತರಂತೆ ಕಾಣಿಸಿಕೊಳ್ಳುವ ಆಸೆಯನ್ನು ತೊರೆದು ನಮ್ಮ ಬದುಕಿಗೆ ಬೆಳಕಾಗಬಲ್ಲ ಬುದ್ಧಿವಂತಿಕೆಯನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ನಮಗೆ ಯಾವುದು ಅಗತ್ಯವಿದೆಯೋ ಅದರ ಕುರಿತಾಗಿ ಹೆಚ್ಚು ಕಾಳಜಿವಹಿಸುವುದನ್ನು, ಅದನ್ನು ಪಡೆಯುವ ಪ್ರಯತ್ನವನ್ನು ನಾವು ಜಾರಿಯಲ್ಲಿ ಇರಿಸಬೇಕು. ಇದು ನಮ್ಮ ಬಯಕೆಗಳ ಪೂರೈಕೆಗೆ ರಹದಾರಿಯನ್ನು ಒದಗಿಸುತ್ತದೆ. ಜಗತ್ತು ಅದನ್ನು ಕೊಡುಗೆಯಾಗಿ ನೀಡುತ್ತದೆ. ಬದುಕು ಸುಂದರವಾಗುತ್ತದೆ.

(ಲೇಖಕರು ಅಧ್ಯಾಪಕರು)