ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳನ್ನು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ಮಾಡಿಸಬೇಕು(Ballary maternal death; demanded investigation by sitting High Court judge) ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಆಗ್ರಹಿಸಿದ್ದಾರೆ.
ಕಳಪೆ ಔಷಧ ಪೂರೈಕೆ ವಿಷಯ ಸರ್ಕಾರದ ಗಮನಕ್ಕೆ ಬಂದಿರಲಿಲ್ಲವೇ? ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundurao) ಅವರಿಗೆ ಈ ಮಾಹಿತಿ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಈ ವರ್ಷ 327 ಬಾಣಂತಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ! ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ನೀಡಿರುವ ಈ ಮಾಹಿತಿ ನನಗೆ ಆಘಾತವುಂಟು ಮಾಡಿದೆ. ಮಹಿಳೆಯರು ಆಸ್ಪತ್ರೆಗಳಲ್ಲಿಯೇ ಜೀವ ಚೆಲ್ಲುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದೇವೆ ಎನ್ನುವ ರಾಜ್ಯ ಕಾಂಗ್ರೆಸ್ ಸರ್ಕಾರ, ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ. ಇದೇನಾ ಮಹಿಳೆಯರ ಸಬಲೀಕರಣ? ಎಂದು ಪ್ರಶ್ನೆ ಮಾಡಿದ್ದಾರೆ.
ಬಳ್ಳಾರಿ ಆಸ್ಪತ್ರೆಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿದ ಕಂಪನಿ ಯಾವುದು? ಅದು ಯಾರದ್ದು? ಅನೇಕ ದಿನಗಳಿಂದ ಕಳಪೆ ಗ್ಲೂಕೋಸ್, ಔಷಧ ಪೂರೈಕೆ ಆಗುತ್ತಿದ್ದರೂ ಸರ್ಕಾರ ಏನು ಮಾಡುತ್ತಿತ್ತು? ಇಷ್ಟು ಸೂಕ್ಷ್ಮ ವಿಚಾರವನ್ನು ಆರೋಗ್ಯ ಸಚಿವರು ಅಲಕ್ಷ್ಯ ಮಾಡಿದ್ದೇಕೆ? ಸಚಿವರಿಗೆ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಗೊತ್ತೇ ಇರಲಿಲ್ಲವೇ? ಎಂದು ಆರೋಗ್ಯ ಸಚಿವರನ್ನು ತರಾಟೆ ತೆಗೆದುಕೊಂಡಿದ್ದಾರೆ.
ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವೆ ಎಂಬ ಸಚಿವರ ಹೇಳಿಕೆ ಅನಪೇಕ್ಷಿತ. ಜವಾಬ್ದಾರಿ ಕೊಟ್ಟಿರುವುದು ಕೈ ತೊಳೆದುಕೊಂಡು ಪಾರಾಗಲಿಕ್ಕಲ್ಲ. ಅಗತ್ಯವಿರುವುದು ರೋಗಗ್ರಸ್ತ ಆರೋಗ್ಯ ಇಲಾಖೆಗೆ ಸೂಕ್ತ ಚಿಕಿತ್ಸೆ. ಪಲಾಯನಕ್ಕಿಂತ ಪ್ರಾಯಶ್ಚಿತ್ತ ಮುಖ್ಯ. ಇಲಾಖೆಯನ್ನು ಸರಿ ಮಾಡುವುದು ಅವರ ಹೊಣೆ. ಗೃಹಲಕ್ಷ್ಮೀಯರ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.