ಬಾಳೆಹೊನ್ನೂರು: ಜಿಲ್ಲೆಯಲ್ಲಿ ಬಾಳೆಹೊನ್ನೂರು ಅತ್ಯಂತ ವಿಸ್ತಾರವಾದ ಗ್ರಾಮವಾಗಿದ್ದು ಇಲ್ಲಿ ಸಾವಿರಾರು ವಿದ್ಯಾರ್ಥಿಗಳು, ಆಟಗಾರರು ಇದ್ದಾರೆ. ಆದರೆ ಇಲ್ಲಿ ಕ್ರೀಡಾಂಗಣದ ಕೊರತೆಯಿದ್ದು ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದೆ ಎಂದು ಕುವೈತ್ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಹೇಳಿದರು.
ಸಮೀಪದ ಅಕ್ಷರನಗರದಲ್ಲಿ ಅಕ್ಷರನಗರ ಹಂಟರ್ಸ್ ತಂಡ ಆಯೋಜಿಸಿದ್ದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಬಾಳೆಹೊನ್ನೂರು ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಕ್ರೀಡಾಂಗಣಗಳಿದ್ದು ಅವುಗಳು ಸಹ ಹಲವು ಬಲಾಢ್ಯರಿಂದ ಒತ್ತುವರಿಯಾಗಿದೆ. ಗ್ರಾಮೀಣ ಯುವಕರು, ಆಟಗಾರರಿಗೆ ಆಟವಾಡಲು ಸೂಕ್ತ ಕ್ರೀಡಾಂಗಣದ ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿ ಯುವ ಪ್ರತಿಭೆಗಳಿಗೆ ಸೂಕ್ತ ಅವಕಾಶ, ವೇದಿಕೆಗಳು ದೊರೆಯುತ್ತಿಲ್ಲ ಎಂದರು.
ಬಾಳೆಹೊನ್ನೂರು ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ಆಗಬೇಕು ಎಂಬ ಯೋಜನೆಯೊಂದಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಬೇಕಾದ ಅಗತ್ಯವಿದೆ. ಯುವಕರು, ಕ್ರೀಡಾಪ್ರೇಮಿಗಳು ಇದಕ್ಕೆ ಸಹಕಾರ ನೀಡಬೇಕಿದೆ. ಲೋಕಸಭೆ ಚುನಾವಣೆ ಮುಕ್ತಾಯಗೊಂಡ ಬಳಿಕ ಹೋರಾಟಕ್ಕೆ ಚಾಲನೆ ನೀಡಬೇಕಿದೆ ಎಂದರು.
ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್ ಮಾತನಾಡಿ, ಅಕ್ಷರನಗರ ಗ್ರಾಮಕ್ಕೂ ಸಹ ಕ್ರೀಡಾಂಗಣದ ಅವಶ್ಯಕತೆಯಿದೆ. ಇಲ್ಲಿರುವ ಕ್ರೀಡಾಂಗಣದ ಅಭಿವೃದ್ಧಿಗೆ ಗ್ರಾಪಂ, ವೈಯಕ್ತಿಕವಾಗಿ ಸಹಕಾರ ನೀಡಲಾಗುವುದು ಎಂದರು. ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಮಾತನಾಡಿ, ಕ್ರೀಡೆಯಿಂದ ದೈಹಿಕ, ಮಾನಸಿಕ ಸಮತೋಲನ, ಮನಸ್ಸು ವಿಕಸನಗೊಳ್ಳಲು ಸಾಧ್ಯ. ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕ್ರೀಡಾಂಗಣಗಳ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಬಾಳೆಹೊನ್ನೂರು ಪಟ್ಟಣದ ಜನತೆಗೆ ಅಗತ್ಯವಾಗಿ ಬೇಕಿರುವ ಕ್ರೀಡಾಂಗಣ ಪಡೆಯಲು ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ಕ್ರೀಡಾಂಗಣಕ್ಕಾಗಿ ಜಾತಿ, ಮತ, ಪಕ್ಷ ಬೇಧ ತೊರೆದು ಹೋರಾಟ ನಡೆಸಬೇಕಿದೆ ಎಂದರು.
ಬಿ.ಕಣಬೂರು ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್, ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಟ್ರ್ಯಾಕ್ಟರ್ ಚಾಲಕರ ಸಂಘದ ಅಧ್ಯಕ್ಷ ತಿಪ್ಪೇಶ್, ಜಗದೀಶ್ ಅರಳೀಕೊಪ್ಪ, ಸಂದೀಪ್‌ಶೆಟ್ಟಿ, ಅಶೋಕ್, ಸುಜಿತ್ ಇತರರಿದ್ಷರು.