ಬಾಳೆಹೊನ್ನೂರು ಸಮೀಪದ ಎಲೆಕಲ್ಲು ಬಳಿ ಕಂದಕಕ್ಕೆ ಉರುಳಿದ ರಸಗೊಬ್ಬರ ತುಂಬಿದ ಲಾರಿ. 
ನ್ಯೂಸ್

ಗುಂಡಿ ತಪ್ಪಿಸಲು ಹೋದ ಲಾರಿ ಕಂದಕಕ್ಕೆ

ಬಾಳೆಹೊನ್ನೂರು: ಗುಂಡಿ ತಪ್ಪಿಸಲು ಹೋದ ಲಾರಿಯೊಂದು ಶನಿವಾರ ರಾತ್ರಿ ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಎಲೆಕಲ್ಲು ಬಳಿ ಕಂದಕಕ್ಕೆ ಉರುಳಿದೆ.
ಬಾಳೆಹೊನ್ನೂರು ಕಡೆಗೆ ರಸಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿ ಗುಂಡಿಗೆ ಇಳಿಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಲೆಕಲ್ಲು ಮೀಸಲು ಅರಣ್ಯದ ಮುಖ್ಯರಸ್ತೆಯ ವಿವಿಧೆಡೆ ಹಲವು ಕಡೆಗಳಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಸೆ.22ರಂದೂ ಇದೇ ರಸ್ತೆಯಲ್ಲಿ ತರಕಾರಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿತ್ತು.
ಶನಿವಾರ ರಾತ್ರಿ ಬಾಳೆಹೊನ್ನೂರು-ಶೃಂಗೇರಿ ರಸ್ತೆಯ ಸೀಗೋಡು ಮುಖ್ಯ ರಸ್ತೆ ಬಳಿಯೂ ಗುಂಡಿ ತಪ್ಪಿಸಲು ಹೋದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಹಲವು ಕಡೆಗಳಲ್ಲಿ ಅಪಾಯಕಾರಿ ರಸ್ತೆ ಇರುವ ಬಳಿ ಬ್ಯಾರಿಕೇಡ್‌ಗಳು ಇರದೆ ಹಾಗೂ ಗುಂಡಿಬಿದ್ದ ಹಿನ್ನೆಲೆಯಲ್ಲಿ ಪದೇ ಪದೆ ವಾಹನ ಅಪಘಾತ ಸಂಭವಿಸುತ್ತಿದೆ ಎಂದು ಚಾಲಕರು ದೂರಿದ್ದಾರೆ.