ನ್ಯೂಸ್

Bajrang Dal Ban: ಕೆ. ಸುಧಾಕರ್ ನೇತೃತ್ವದಲ್ಲಿ ಬಜರಂಗದಳ, ಹಿಂದೂಪರ ಸಂಘಟನೆಗಳ ಪ್ರತಿಭಟನೆ!

ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂಘದ ನಿಷೇಧದ ಘೋಷಣೆ ಹಿನ್ನೆಲೆ ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳು ಚಿಕ್ಕಬಳ್ಳಾಪುರದಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕುತ್ತಿವೆ.

ಚಿಕ್ಕಬಳ್ಳಾಪುರದಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿರುವುದಕ್ಕೆ ಪ್ರತಿಭಟನೆಗೆ ಸಾಥ್ ನೀಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಕಾಂಗ್ರೆಸ್ ಧೋರಣೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಚಿವ ಡಾ ಕೆ.ಸುಧಾಕರ್ ಮಾತನಾಡಿ, ಉಗ್ರಗಾಮಿ ಸಂಘಟನೆಗಳಿಗೂ ದೇಶಭಕ್ತಿಯ ರಾಷ್ಟ್ರೀಯವಾಗಿ ಸಂಘಟನೆಗಳಿಗೂ ಹೋಲಿಕೆ ಸಲ್ಲದು. ನ್ಯಾಯಾಲಯವೇ ಉಗ್ರ ಚಟುವಟಿಕೆಗೆ ಉತ್ತೇಜನ ನೀಡುವ ಸಂಘ ಸಂಸ್ಥೆಗಳಿಗೆ ಛೀಮಾರಿ ಹಾಕಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸಾಕ್ಷ್ಯಾಧಾರಗಳನ್ನಾಧಾರಿಸಿ ಕೆಲ ಸಂಘಟನೆಗಳನ್ನು ಬ್ಯಾನ್ ಸಹ ಮಾಡಿದೆ. ಹೀಗಿರುವಾಗ ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಗೊಂದಲ‌ ಸೃಷ್ಟಿಸುತ್ತಿದೆ. ಕಾಂಗ್ರೆಸ್ ವಿಕಾಸದ ಬದಲಿಗೆ ವಿನಾಶಕಾರಿ ಪರವಾಗಿ ಇದೆ. ಉಗ್ರ ಸಂಘಟನೆಗಳೊಂದಿಗೆ ದೇಶಭಕ್ತಿಯ ಸಂಘಟನೆಗಳನ್ನು‌ ಒಂದೇ ದೃಷ್ಟಿಯಲ್ಲಿ ನೋಡುತ್ತಿದೆ. ಇಂತಹ ಧೋರಣೆಗಳಿಂದಲೇ ಈಗಾಗಲೇ ದೇಶದ ವಿವಿಧೆಡೆ ಕಾಂಗ್ರೆಸ್ ಕಚೇರಿಗಳು ಮುಚ್ಚಿ ಹೋಗಿವೆ ಎಂದು ಕಾಂಗ್ರೆಸ್​​ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿಯೇ ಕಾಂಗ್ರೆಸ್​ಗೆ ಬರಲಿದೆ. ಒಂದು‌ ಸಮುದಾಯದ ಮನವೊಲಿಕೆಯ ಪ್ರಯತ್ನದಲ್ಲಿ ವಿವಾದ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.