ಬೆಂಗಳೂರು: ಅಪ್ರಾಪ್ತ ಸಂತ್ರಸ್ತೆಯು ವಯಸ್ಕಳಾದ ನಂತರ ಆಕೆಯನ್ನು ವಿವಾಹವಾಗುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಆರೋಪಿಯು ಸಂತ್ರಸ್ತೆಯೊಂದಿಗೆ ಹಲವು ಬಾರಿ ಲೈಂಗಿಕ ಸಂಪರ್ಕ ನಡೆಸಿದ ಕಾರಣ ಆಕೆ ಗರ್ಭಿಣಿಯಾಗಿದ್ದಳು. ಆದ್ದರಿಂದ, 2024ರ ಆ.19ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಸಂತ್ರಸ್ತೆ ಅದೇ ವರ್ಷ ನವೆಂಬರ್ನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಳು. ಸಂತ್ರಸ್ತೆ ಅಪ್ರಾಪ್ತ ವಯಸ್ಕಳಾದ ಕಾರಣ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಯುವತಿಗೆ ಈ ವರ್ಷದ (2026) ಆಗಸ್ಟ್ನಲ್ಲಿ 18 ವರ್ಷ ತುಂಬಲಿದ್ದು, ಆಕೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಆರೋಪಿ ತಿಳಿಸಿದ್ದಾನೆ.
ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂತ್ರಸ್ತೆ ಮತ್ತು ಆಕೆಯ ತಾಯಿ, ಪ್ರಾಪ್ತ ವಯಸ್ಕಳಾದ ನಂತರ ಮದುವೆ ಮಾಡಿಕೊಳ್ಳುವುದಾಗಿ ಆರೋಪಿ ಮತ್ತು ಆತನ ಕುಟುಂಬ ಒಪ್ಪಿದೆ. ಆದ್ದರಿಂದ, ಆತನಿಗೆ ಜಾಮೀನು ನೀಡಲು ತಮ್ಮ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ತಿಳಿಸಿದರು. ಇದನ್ನು ನ್ಯಾಯಪೀಠ ಪರಿಗಣಿಸಿತು.
ಹಲವು ಷರತ್ತುಗಳು:
ಸಂತ್ರಸ್ತೆಯ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಪೀಠ, ಸಂತ್ರಸ್ತೆಯು ವಯಸ್ಕಳಾದ ತಿಂಗಳೊಳಗೆ ಆಕೆಯನ್ನು ವಿವಾಹವಾಗುವುದಾಗಿ ಆರೋಪಿ ಮತ್ತು ಆತನ ಪಾಲಕರು ಪ್ರಮಾಣ ಪತ್ರ ಸಲ್ಲಿಸಬೇಕು. 1 ಲಕ್ಷ ರೂ. ಬಾಂಡ್, ಒಬ್ಬರ ಭದ್ರತೆ ನೀಡಬೇಕು. ಸಾಗಳ ಮೇಲೆ ಪ್ರಭಾವ ಬೀರಬಾರದು ಮತ್ತು ಪ್ರಾಪ್ತ ವಯಸ್ಕಳಾದ ತಿಂಗಳೊಳಗೆ ಆಕೆಯನ್ನು ಮದುವೆಯಾಗದಿದ್ದರೆ ಜಾಮೀನು ರದ್ದುಗೊಳಿಸಲಾಗುವುದು ಎಂಬ ಷರತ್ತಿಗಳನ್ನು ವಿಧಿಸಿದೆ.