ನ್ಯೂಸ್

ಲೈಂಗಿಕ ದೌರ್ಜನ್ಯ ಪ್ರಕರಣ; ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಜಾಮೀನು ಅರ್ಜಿ ವಜಾ

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಪ್ರಜ್ವಲ್​ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​ ರೇವಣ್ಣ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ ದಾಖಲಾದ ಮೊದಲನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನಿಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪ್ರಜ್ವಲ್​ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಪ್ರಜ್ವಲ್​ ರೇವಣ್ಣಗೆ ನಿರಾಸೆ ಉಂಟಾಗಿದ್ದು, ಪ್ರಜ್ವಲ್​ ಪರ ವಕೀಲರು ಹೈಕೋರ್ಟ್​ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ನ್ಯಾಯಾಂಗ ಬಂಧನ ವಿಧಿಸಿದ ಕಾರಣ ಪರಪ್ಪನ ಅಗ್ರಹಾರದಲ್ಲಿದ್ದ ಪ್ರಜ್ವಲ್​ ರೇವಣ್ಣರನ್ನು ಎಸ್​ಐಟಿ ಅಧಿಕಾರಿಗಳು ಮತ್ತೊಮ್ಮೆ ವಶಕ್ಕೆ ಪಡೆದುಕೊಂಡಿದ್ದರು. ಇದಲ್ಲದೆ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಎಸ್​ಐಟಿ ಅಧಿಕಾರಿಗಳು ಇಂದು (ಜೂನ್ 26) ಸ್ಥಳ ಮಹಜರು ನಡೆಸುತ್ತಿದ್ದಾರೆ.