ನ್ಯೂಸ್

ಪವಿತ್ರಾಗೌಡ ಸೇರಿ ಇಬ್ಬರ ಜಾಮೀನು ಅರ್ಜಿ ತಿರಸ್ಕಾರ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ ಮತ್ತು ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿಯಾದ ಪವಿತ್ರಾಗೌಡ ಮತ್ತು ೭ ಆರೋಪಿಯಾದ ಅನುಕುಮಾರ್ ಪರವಾಗಿ ಅವರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶನಿವಾರ ನಗರದ ೫೭ನೇ ಸಿಸಿಎಚ್ ಕೋರ್ಟ್ ತಿರಸ್ಕರಿಸಿದೆ.
ಪವಿತ್ರಾಗೌಡ ಪರ ವಕೀಲರು, ಪವಿತ್ರಾಗೌಡ ಅವರು ಮಹಿಳೆಯಾಗಿದ್ದು, ಜತೆಗೆ ಅಪ್ರಾಪ್ತ ಬಾಲಕಿಯ ತಾಯಿಯಾಗಿದ್ದಾರೆ. ರೇಣುಕಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವುದೇ ಆತನ ಕೊಲೆಗೆ ಕಾರಣವಲ್ಲ ಎಂದು ವಾದಿಸಿದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರು, ಆರೋಪಿ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬಾರದು. ರೇಣುಕಸ್ವಾಮಿಯನ್ನು ಊಹಿಸಲಾಗದಷ್ಟು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ. ಇದಲ್ಲದೆ, ಇಬ್ಬರು ಪ್ರತ್ಯಕ್ಷದರ್ಶಿಗಳು ಪವಿತ್ರಾ ಅವರನ್ನು ಅಪರಾಧದ ಸ್ಥಳದಲ್ಲಿ ಗುರುತಿಸಿದ್ದಾರೆ. ರೇಣುಕಸ್ವಾಮಿ ರಕ್ತದ ಮಾದರಿ ಪವಿತ್ರಾಗೌಡ ಅವರ ಬಟ್ಟೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಅಪರಾಧಕ್ಕೆ ಬಳಸಿದ ಕಾರಿನಲ್ಲಿ ಅವರು ಪ್ರಯಾಣಿಸಿದ್ದಾರೆ ಎಂದು ವಾದಿಸಿದ್ದರು.
ಅದೇ ರೀತಿ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ತಂದು ಪಟ್ಟಣಗೆರೆ ಶೆಡ್‌ಗೆ ಹಾಕಿ ಬೀಗ ಹಾಕಿದವರಲ್ಲಿ ಅರ್ಜಿದಾರರೂ ಇದ್ದಾರೆ ಎಂದು ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಅಪರಾಧದ ಸ್ಥಳದಲ್ಲಿ ಹಾಜರಾಗಿದ್ದರು. ಅವರ ಬಟ್ಟೆಯಲ್ಲಿ ರೇಣುಕಸ್ವಾಮಿ ಅವರ ರಕ್ತದ ಮಾದರಿಗಳು ಪತ್ತೆಯಾಗಿವೆ ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಂತಿಮವಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ. ಜಾಮೀನು ಅರ್ಜಿ ತಿರಸ್ಕಾರಗೊಂಡಿರುವ ಹಿನ್ನೆಲೆಯಲ್ಲಿ ಪವಿತ್ರಾಗೌಡ ಅವರಿಗೆ ಮತ್ತೆ ನಿರಾಸೆಯಾಗಿದ್ದು ಅವರು ಮತ್ತಷ್ಟು ಸಮಯ ಜೈಲಿನಲ್ಲಿಯೇ ಕಳೆಯಬೇಕಾಗಿದೆ.
ಜೂ.೮ ರಂದು ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹಿಂಸೆ ನೀಡಿ ಹತ್ಯೆ ಮಾಡಿದ್ದ ಆರೋಪದ ಮೇರೆಗೆ ನಟ ದರ್ಶನ್ ಸೇರಿ ೧೭ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು.