ನ್ಯೂಸ್

ಬಗರ್ ಹುಕುಂ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

Webdesk - Ravikanth

ಬೆಂಗಳೂರು: ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಸರ್ಕಾರ ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿರುವ ಸಾಗುವಳಿ ಜಮೀನನ್ನು ಸಕ್ರಮಕ್ಕೆ ಅರ್ಜಿ ಸಲ್ಲಿಸಲು ರೈತರಿಗೆ ಆರು ತಿಂಗಳು ಸಮಯಾವಕಾಶ ನೀಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀಮಾನ ಕೈಗೊಳ್ಳಲಾಗಿದೆ. ಸರ್ಕಾರ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್ ಹುಕುಂ ಸಾಗುವಳಿದಾರರಿಗೆ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಈ ಹಿಂದೆಯೂ ಅವಕಾಶ ನೀಡಿತ್ತು. ಆದರೆ ಗ್ರಾಮೀಣ ಬಡವರು, ಅನಕ್ಷರಸ್ಥರು, ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಎಷ್ಟೋ ಜನರಿಗೆ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲ. ಮತ್ತೊಂದು ಸುತ್ತಿನ ಅನುಮತಿ ನೀಡುವ ಮೂಲಕ ಸಾಗುವಳಿದಾರರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಹಾವಳಿ ಬಗರ್ ಹುಕುಂ ಅಕ್ರಮ ಸಕ್ರಮಕ್ಕೆ ಅಡ್ಡಿಯಾಗಿತ್ತು. ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಆನೇಕ ರೈತರು ಮನವಿ ಮಾಡಿದ್ದರು. ಶಾಸಕರು, ಜನಪ್ರತಿನಿಧಿಗಳು ಕೂಡ ಗಡುವು ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ರೈತರಿಗೆ ಅರ್ಜಿ ಸಲ್ಲಿಸಲು ಸರ್ಕಾರ ಆರು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಿದೆ ಎಂದ ಮಾಧುಸ್ವಾಮಿ, ಈಗಾಗಲೆ ಲಕ್ಷಾಂತರ ಅರ್ಜಿ ಸಲ್ಲಿಕೆಯಾಗಿವೆ. ಈಗ ಗಡುವು ವಿಸ್ತರಣೆಯಿಂದ ಇನ್ನಷ್ಟು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸಂಪುಟ ಸಭೆ ಮುಖ್ಯಾಂಶಗಳು

  • ರೈತರಿಗೆ ಕೃಷಿ ಯಂತ್ರೋಪಕರಣ ಬಳಕೆ ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂ.ಗಳಂತೆ ಗರಿಷ್ಠ 5 ಎಕರೆಗೆ ಡೀಸೆಲ್ ಸಹಾಯಧ ನೀಡಲು ರೈತ ಶಕ್ತಿ ಹೊಸ ಯೋಜನೆ ಅನುಷ್ಠಾನಕ್ಕೆ ಅನುಮೋದನೆ.
  • ರಾಜ್ಯ ಉಗ್ರಾಣ ನಿಗಮ ಕೈಗೆತ್ತಿಕೊಂಡಿರುವ ಅಪೂರ್ಣ ಉಗ್ರಾಣ ಮತ್ತು ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲು 862.37 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
  • ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಯೋಜನೆಗೆ ಘಟನೋತ್ತರ ಅನುಮೋದನೆ.
  • ಸಾರಿಗೆ ಇಲಾಖೆಯಲ್ಲಿ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆ ನೇಮಕದಲ್ಲಿ ಶೇ.5 ಬಡ್ತಿ ನೀಡಲು ನಿರ್ಧಾರ.
  • ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಕುಟುಂಬದವರಿಗೆ ಅನುಕಂಪದ ಹುದ್ದೆ. ಈಗಾಗಲೆ ಸರ್ಕಾರಿ ನೌಕರರು ಮೃತಪಟ್ಟಾಗ ನೀಡುವ ಅನುಕಂಪದ ನೇಮಕಾತಿ ನಿಯಮಗಳನ್ನು ಈ ನೇಮಕದಲ್ಲೂ ಅನ್ವಯಿಸಲು ತೀರ್ಮಾನ. 
  • ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಿರುವ ಆಂಟಿ ಹಿಮೋಫೀಲಿಯಾ ಔಷಧ ಖರೀದಿಸಿ ಸಂಗ್ರಹಿಸಲು 29 ಕೋಟಿ ರೂ. ಮಂಜೂರು.
  • ಪರಿಶಿಷ್ಟ ಜಾತಿ, ಪಂಗಡ ಕೈಗಾರಿಕೆ ನಿವೇಶನಕ್ಕೆ ನೀಡುತ್ತಿದ್ದ ಶೇ.50 ಸಬ್ಸಿಡಿಯನ್ನು ಶೇ.75ಕ್ಕೆ ಏರಿಸಲು ತೀರ್ವನ.
  • ತೆಲಸೇಮಿಯ ಮತ್ತು ಸಿಕಲ್​ಸೆಲ್ ಅನೀಮಿಯಾ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ ಐರನ್ ಚಿಲೇಟಿಂಗ್ ಏಜೆಂಟ್ಸ್ ಔಷಧಗಳನ್ನು 15 ಕೋಟಿ ರೂ.ಗಳಲ್ಲಿ ಸಂಗ್ರಹಿಸಲು ಅನುಮೋದನೆ.

ನೂತನ ಸೈಬರ್ ಪಾಲಿಸಿ ಪ್ರಕಟ

ಹ್ಯಾಕಿಂಗ್, ಸೈಬರ್ ದಾಳಿ, ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ದೇಶದಲ್ಲಿ ಅತ್ಯಧಿಕ ಸೈಬರ್ ಅಪರಾಧ ಕರ್ನಾಟಕದಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ರಾಜ್ಯವು ಕರ್ನಾಟಕ ಸೈಬರ್ ಭದ್ರತಾ ನೀತಿ 2022-27 ಅಳವಡಿಸಿಕೊಳ್ಳುತ್ತಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ನೂತನ ನೀತಿಯ ಬಗ್ಗೆ ಚರ್ಚೆ ನಡೆದು, ಅನುಷ್ಠಾನಕ್ಕೆ ತರಲು ಒಪ್ಪಿಗೆ ನೀಡಲಾಯಿತು. ಈ ಸಾಲಿನ ಬಜೆಟ್​ನಲ್ಲಿ ಸಹ ಈ ನೀತಿ ತರುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಇದೀಗ ಬಹು ಉದ್ದೇಶ ಇಟ್ಟುಕೊಂಡು ನೀತಿ ಜಾರಿಗೆ ತರಲಾಗಿದ್ದು, ಉದ್ಯೋಗ ಸೃಜನೆಯನ್ನು ನಿರೀಕ್ಷಿಸಲಾಗಿದೆ. 2-3ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದು, ಸೈಬರ್ ಸುಭದ್ರತೆಗೆ ಪೂರಕ ವಾತಾವರಣ ನಿರ್ವಿುಸುವುದು, 2025ರ ಹೊತ್ತಿಗೆ ಸೈಬರ್ ಸುಭದ್ರತೆ ಉದ್ಯಮ ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ. ಹೂಡಿಕೆಗೆ ಪೂರಕವಾಗಿ ಹಣಕಾಸು ಪ್ರೋತ್ಸಾಹ, ರಿಯಾಯಿತಿ, ವಿನಾಯಿತಿ, ಸಬ್ಸಿಡಿಗಳನ್ನು ಪಾರದರ್ಶಕವಾಗಿ ಒದಗಿಸಲು ನಿರ್ಧರಿಸಲಾಗಿದೆ. ನೀತಿಯ ಅನುಷ್ಠಾನಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 103.87 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಹಣದಲ್ಲಿ ಅರಿವು ಮೂಡಿಸುವುದು, ಕೌಶಲ ವರ್ಧನೆ, ಉದ್ಯಮ, ನವ್ಯೋದ್ಯಮ ಪ್ರೋತ್ಸಾಹ, ಸಾಮರ್ಥ್ಯ ಬಲವರ್ಧನೆಗೆ ಪಾಲುದಾರಿಕೆ- ಸಹಭಾಗಿತ್ವ, ಆಂತರಿಕ ತರಬೇತಿ, ಸಂಶೋಧನೆ, ಸೈಬರ್ ಭದ್ರತಾ ಸಬ್ಸಿಡಿ ಕೊಡಲು ಬಳಸಿಕೊಳ್ಳಲಾಗುತ್ತದೆ. ಸೈಬರ್ ಕೌಶಲ ಮಾನವ ಸಂಪನ್ಮೂಲದ ಕೊರತೆ, ಪಠ್ಯದಲ್ಲಿ ಸೈಬರ್ ಕುರಿತು ಪಾಠ, ಉದ್ಯೋಗ ಸೃಜನೆ ಮುಂತಾದ ಅಂಶಗಳ ಬಗ್ಗೆ ನೀತಿಯಲ್ಲಿ ಪ್ರಸ್ತಾಪವಿದೆ.

ಸಿಎಸ್ ನೇಮಕ ಅಧಿಕಾರ ಸಿಎಂಗೆ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವಧಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ನೂತನ ಮುಖ್ಯ ಕಾರ್ಯದರ್ಶಿ ನೇಮಕ ಅಧಿಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ವನವಾಗಿದ್ದು, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ನೇಮಕ ಅಧಿಕಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ ಎಂದು ಕಾನೂನು

ಸಚಿವ ಜೆ.ಸಿ. ಮಾಧು ಸ್ವಾಮಿ ತಿಳಿಸಿದ್ದಾರೆ. 9 ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬ ರನ್ನು ಆಯ್ಕೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಅವರು 2023 ನವೆಂಬರ್​ಗೆ ನಿವೃತ್ತಿಯಾಗಲಿದ್ದಾರೆ. ಡಾ.ರಜನೀಶ್ ಗೋಯಲ್ (2024 ಜುಲೈ), ಐಎಸ್​ಎನ್ ಪ್ರಸಾದ್ (2023 ಜೂನ್), ವಿ.ಮಂಜುಳಾ (2024 ಮೇ), ಅಜಯ್ ಸೇಠ್ (2025 ಜೂನ್), ರಮಣರೆಡ್ಡಿ (2023 ಆಗಸ್ಟ್), ಎಂ.ವಿ.ಜಯಂತಿ (2022 ನವೆಂಬರ್), ಅನಿಲ್​ಕುಮಾರ್ ಝಾ (2023 ಡಿಸೆಂಬರ್) ಹಾಗೂ ರಾಕೇಶ್ ಸಿಂಗ್ (2024 ಮೇ) ಆಯ್ಕೆ ಪಟ್ಟಿಯಲ್ಲಿದ್ದಾರೆ.