ನ್ಯೂಸ್

ಪೊಲೀಸ್ ಇಲಾಖೆ ಕಾರ್ಯ ಅನನ್ಯ

ಬಾಗಲಕೋಟೆ: ನಾಡಿನಲ್ಲಿ ಶಾಂತಿ ಹಾಗೂ ಕಾನೂನು ಪಾಲನೆಗಾಗಿ ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಅನನ್ಯವಾದುದು ಎಂದು ನಿವೃತ್ತ ಪಿಎಸ್‌ಐ ಬಿ.ವೈ.ಕಜಗಲ್ಲ ಹೇಳಿದರು.

ನವನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸ್ವೀಕಾರ ಮತ್ತು ಸಾಂಪ್ರದಾಯಕ ಕವಾಯತು ವೀಕ್ಷಿಸಿ ಅವರು ಮಾತನಾಡಿದರು.

ಸಮಾಜದ ಸುರಕ್ಷತೆ ಹೊಣೆ ಹೊತ್ತು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸೇವೆ ಅವಿಸ್ಮರಣೀಯವಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ನಿವೃತ್ತಿ ನಂತರ ಶ್ರಮವನ್ನು ನೆನಪಿಸಿಕೊಳ್ಳುವ ದಿನ ಇದಾಗಿದೆ. ನಿವೃತ್ತಿಯ ನಂತರವೂ ಕರೆದು ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ಮತ್ತು ಸಿಬ್ಬಂದಿ ನೆನಪಿಸಿ ಅವರ ಸೇವೆಯನ್ನು ಸ್ಮರಿಸುವ ದಿನ ಇದಾಗಿದೆ. ಜಿಲ್ಲಾ ಪೊಲೀಸ್ ಘಟಕದಲ್ಲಿ ಕೈಗೊಂಡ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 2019-20ರಲ್ಲಿ 21 ಜನರಿಗೆ 2,73,957 ರೂ. ಹಾಗೂ 2020-21ರಲ್ಲಿ 36 ಜನ ನಿವೃತ್ತ ಪೊಲೀಸರಿಗೆ 2,88,198 ರೂ. ಕಲ್ಯಾಣ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಭಾಗ್ಯ ಯೋಜನೆಯಡಿ 2019-20ರಲ್ಲಿ 18 ಜನ, 2020-21ರಲ್ಲಿ 11 ಜನ ಚಿಕಿತ್ಸೆ ಪಡೆದಿದ್ದಾರೆ. ಕಳೆದ 2 ವರ್ಷದಲ್ಲಿ ಈ ೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ 600 ಜನ ಪೊಲೀಸರು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 12 ಜನ ಪೊಲೀಸ್ ಮಕ್ಕಳಿಗೆ 95 ಸಾವಿರ ರೂ. ಪ್ರೋತ್ಸಾಹಧನ, 9 ಜನ ಅಂತ್ಯಸಂಸ್ಕಾರಕ್ಕೆ 90 ಸಾವಿರ ರೂ. ನೀಡಲಾಗಿದೆ. ಮುಧೋಳದಲ್ಲಿ ಆಧುನಿಕ ಸುಸಜ್ಜಿತ ಪೊಲೀಸ್ ಸಮುದಾಯ ಭವನ ಸೇರಿ ಅನೇಕ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಎಸ್‌ಪಿಗಳಾದ ಎಂ.ಪಾಂಡುರಂಗಯ್ಯ, ರವೀಂದ್ರ ಶಿರೂರ, ಚಂದ್ರಶೇಖರ ನಂದರೆಡ್ಡಿ, ಭರತ ತಳವಾರ ಇತರರು ಉಪಸ್ಥಿತರಿದ್ದರು.

ದೇಶದ ಗಡಿಯಲ್ಲಿ ಸೈನಿಕರು ದೇಶದ ರಕ್ಷಣೆ ಮಾಡಿದರೆ, ಪೊಲೀಸರು ಸಮಾಜದ ರಕ್ಷಣೆ ಮಾಡುತ್ತಿದ್ದಾರೆ. ಪೊಲೀಸ್ ವೃತ್ತಿ ಮಹತ್ವದ್ದಾಗಿದೆ. ಪೊಲೀಸರು ವೃತ್ತಿಯಿಂದ ನಿವೃತ್ತರಾಗಬೇಕು ವಿನಾ ಕರ್ತವ್ಯ ಪ್ರಜ್ಞೆಯಿಂದಲ್ಲ. ತುರ್ತು ಸಂದರ್ಭದಲ್ಲಿಯೂ ನಿವೃತ್ತರಾದರು ಕರ್ತವ್ಯಕ್ಕೆ ಸಿದ್ಧರಾಗಿರಬೇಕು.
- ಬಿ.ವೈ.ಕಜಗಲ್ಲ ನಿವೃತ್ತ ಪಿಎಸ್‌ಐ

EndFragment