ಮುಂಬೈ: ಮಹಾರಾಷ್ಟ್ರದ ಬದ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದವು ರಾಜ್ಯದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಮಹಾ ವಿಕಾಸ್ ಅಘಾಡಿ ಬುಧವಾರ(ಆಗಸ್ಟ್ 21) ನಡೆಸಿದ ಸಭೆಯಲ್ಲಿ ಪ್ರಕರಣದ ಸೂಕ್ಷ್ಮತೆ ಬಗ್ಗೆ ಚರ್ಚಿಸಿದ್ದು, ಆಗಸ್ಟ್ 24 ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ.
ಸಭೆಯಲ್ಲಿ ಕಾಂಗ್ರೆಸ್, ಶಿವಸೇನೆ (UBT) ಮತ್ತು NCP ಮೂರು ಪಕ್ಷಗಳ ನಾಯಕರು ಬದ್ಲಾಪುರ ಘಟನೆ, ರಾಜ್ಯದ ಒಟ್ಟಾರೆ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆಯ ಬಗ್ಗೆ ಚರ್ಚಿಸಿದರು. ಮಹಾವಿಕಾಸ ಅಘಾಡಿಯ ಮೂರೂ ಪಕ್ಷಗಳು ಈ ಒಂದು ದಿನದ ಬಂದ್‌ನಲ್ಲಿ ಭಾಗವಹಿಸಲಿವೆ ಎಂದು ಎಂವಿಎ ತಿಳಿಸಿದೆ.
ಬದ್ಲಾಪುರದಲ್ಲಿ ನಡೆದ ಈ ಲೈಂಗಿಕ ಶೋಷಣೆ ಸಮಾಜವನ್ನು ಬೆಚ್ಚಿಬೀಳಿಸಿದೆ. ಮಹಾರಾಷ್ಟ್ರದಲ್ಲಿ ಚಿಕ್ಕ ಹೆಣ್ಣುಮಕ್ಕಳೂ ಸುರಕ್ಷಿತವಾಗಿಲ್ಲ, ಇದು ತುಂಬಾ ಆತಂಕಕಾರಿಯಾಗಿದೆ. ಈ ಘಟನೆ ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಹೇಳಿದರು. ಈ ನೀಚ ಕೃತ್ಯವನ್ನು ವಿರೋಧಿಸಿ ಎನ್‌ಸಿಪಿ (ಎಸ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಾಲೆಯೊಂದರ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ನಂತರ ಸಾವಿರಾರು ಪ್ರತಿಭಟನಾಕಾರರು ಬದ್ಲಾಪುರ ರೈಲು ನಿಲ್ದಾಣದ ಹಳಿಗಳನ್ನು ತಡೆದು ಶಾಲಾ ಆವರಣಕ್ಕೆ ನುಗ್ಗಿದರು. ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳದ ವಿರುದ್ಧ ಕೋಪಗೊಂಡ ಪಾಲಕರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಶಾಲಾ ಕಟ್ಟಡವನ್ನು ಧ್ವಂಸಗೊಳಿಸಿದರು.(ಏಜೆನ್ಸೀಸ್)