ನ್ಯೂಸ್

‘ಬಡವರ ಬಂಧು’ ಬಲವರ್ಧನೆಗೆ ಚಿಂತನೆ; ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಮೇಲೆತ್ತುವುದರ ಜತೆಗೆ ಬಡತನ ನಿಮೂಲನೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುವಂತೆ ಮಾಡಬೇಕೆಂಬ ಉದ್ದೇಶದಿಂದ ‘ಬಡವರ ಬಂಧು’ ಯೋಜನೆ ಬಲವರ್ಧನೆಗೆ ಸರ್ಕಾರ ಚಿಂತನೆ ನಡೆಸಿದೆ. ಸಣ್ಣ- ಪುಟ್ಟ ವ್ಯಾಪಾರಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಿ ಆರ್ಥಿಕ ವಹಿವಾಟು ಮತ್ತು ಜನರ ಜೀವನಮಟ್ಟ ಸುಧಾರಣೆ ದೃಷ್ಟಿಯಿಂದ ಯೋಜನೆ ಒಳ್ಳೆಯದು. ಈ ಕಾರಣಕ್ಕೆ ಮುಂದಿನ ಬಜೆಟ್​ನಲ್ಲಿ ಅನುದಾನ ಮೊತ್ತ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಕಾರ ಇಲಾಖೆ ಮೂಲಗಳು ಹೇಳಿವೆ.

ಕುರಿ-ಕೋಳಿ ಸಾಲದ ದಾರಿಯನ್ನೇ ‘ಬಡವರ ಬಂಧು’ ಹಿಡಿಯಬಾರದೆಂಬ ಕಾರಣಕ್ಕೆ ಸಾಲ ವಿತರಣೆ ಮಾರ್ಗಸೂಚಿ ಯಲ್ಲಿ ಕೆಲ ಬದಲಾವಣೆ ತಂದು ಬಲಪಡಿಸಲು ಯೋಚಿಸಿದ್ದು, ಇದರಲ್ಲಿ ಪ್ರಮುಖವಾಗಿ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವುದಾಗಿದೆ. ಒಟ್ಟು ಸಾಲದ ಮೊತ್ತದಲ್ಲಿ ಶೇ.40 ಮರುಪಾವತಿ ಬಾಕಿಯಿದ್ದು, ಇದರ ಉತ್ತರದಾಯಿತ್ವ, ವಸೂಲಿ ಜವಾಬ್ದಾರಿ ಯಾರದು? ಎನ್ನುವುದನ್ನು ಸ್ಪಷ್ಟಪಡಿಸುವುದೂ ಪರಿಷ್ಕರಣೆಯ ಮತ್ತೊಂದು ಉದ್ದೇಶ.

ಫಲಾನುಭವಿಗಳ ಆಯ್ಕೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಆಯಾ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನು ಸದಸ್ಯರನ್ನಾಗಿಸುವುದು. ಸಾಲ ನೀಡುವ ಬ್ಯಾಂಕ್​ಗಳಿಗೆ ಸರ್ಕಾರದಿಂದ ಬಡ್ಡಿ ಖಾತರಿ ಇನ್ನಿತರ ಅಂಶಗಳನ್ನು ಸೇರಿಸಿ ಯೋಜನೆಗೆ ಚೈತನ್ಯ ತುಂಬಲಾಗುತ್ತದೆ. ಜನಪರ ಯೋಜನೆಗಳಲ್ಲಿ ಇರುವಂತೆ ‘ಬಡವರ ಬಂಧು’ನಲ್ಲೂ ಪ್ರಾರಂಭಿಕ ತೊಡಕುಗಳಿವೆ. ಸಮರ್ಪಕ, ಪಾರದರ್ಶಕ, ಸಕಾಲಿಕ ಜತೆಗೆ ಮರುಪಾವತಿ ದಕ್ಷತೆ ಹೆಚ್ಚಿಸುವುದಕ್ಕಾಗಿ ಕೆಲ ಬದಲಾವಣೆ ಮಾಡಲಾಗುತ್ತಿದೆಂದು ಅಧಿಕಾರಿಯೊಬ್ಬರು ತಿಳಿಸಿದರು.

ನಿರಾಸಕ್ತಿ ಹುಟ್ಟಿಸಿದ ಸಂದೇಹ: ಯೋಜನೆಯು 2018-19ರ ಬಜೆಟ್​ನಲ್ಲಿ ಘೋಷಣೆಯಾದರೂ 2018ರ ನ.22ರಂದು ಚಾಲನೆ ಪಡೆಯಿತು. ಆ ವರ್ಷ 50,000 ಜನರಿಗೆ ಸಾಲ ವಿತರಿಸುವ ಗುರಿಯಿದ್ದರೂ 16,769 ಫಲಾನುಭವಿಗಳಿಗೆ ಒಟ್ಟು 952.02 ಲಕ್ಷ ರೂ. ನೀಡಲಾಯಿತು. 2019-20ರಲ್ಲಿ 30,000 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡುವ ಯೋಚನೆಯಿತ್ತು. ಆದರೆ, 2019ರ ಜುಲೈನಲ್ಲಿ ಎಚ್​ಡಿಕೆ ಸರ್ಕಾರ ಪತನದ ಬೆನ್ನಲ್ಲೇ ಈ ಯೋಜನೆ ಕುಂಟುತ್ತಾ ಸಾಗಿದೆ. ಪ್ರಸಕ್ತ ವರ್ಷದ ಡಿಸೆಂಬರ್​ವರೆಗೆ ಕೇವಲ 2,669 ಜನರಿಗೆ 200 ಲಕ್ಷ ರೂ. ಸಾಲ ನೀಡಲಾಗಿದೆ. ಮಂದಗತಿಯ ಪ್ರಗತಿಯಿಂದಾಗಿ ಎಚ್​ಡಿಕೆ ಯೋಜನೆ ಬಗ್ಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರಾಸಕ್ತಿ ವಹಿಸಿದೆ, ಮುಂದಿನ ಬಜೆಟ್​ನಲ್ಲಿ ಕೈಬಿಡಲಿದ್ದಾರೆ ಎಂಬ ಸಂದೇಹ ಹುಟ್ಟಿಸಿದೆ.

ಯೋಜನೆ ತಿರುಳು

ಬೀದಿ ಬದಿ ವ್ಯಾಪಾರಿಗಳಿಗೆ 2000ರಿಂದ 10,000 ರೂ.ವರೆಗೆ ಬಡ್ಡಿರಹಿತ ಅಲ್ಪಾವಧಿ ಸಾಲ ವಿತರಣೆ ಹಾಗೂ ದಿನದ ವ್ಯಾಪಾರ ಮುಗಿದ ಬಳಿಕ 100 ರೂ.ನಂತೆ 100 ದಿನಗಳೊಳಗೆ ಸಾಲ ಮರು ಪಾವತಿಸುವುದು ಯೋಜನೆ ತಿರುಳು. ಮೀಟರ್ ಬಡ್ಡಿ ದಂಧೆ ಹಾಗೂ ಕಿರುಕುಳದ ಸುಳಿಯಿಂದ ಬೀದಿ ಬದಿ ವ್ಯಾಪಾರಿಗಳನ್ನು ಪಾರು ಮಾಡಲೆಂದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 2018-19ನೇ ಸಾಲಿನಲ್ಲಿ ಜಾರಿಗೊಳಿಸಿತು.