ನ್ಯೂಸ್

ಸಾರಿಗೆ ಬಸ್​ಗೆ ಶಾಸಕರ ಪುತ್ರನ ಕಾರು ಡಿಕ್ಕಿ

ಹಾವೇರಿ: ಬ್ಯಾಡಗಿ ಶಾಸಕ ವಿರೂಪಾಕ್ಷ ಬಳ್ಳಾರಿ ಅವರ ಪುತ್ರ ಯುವರಾಜ್ ಚಾಲನೆ ಮಾಡುತ್ತಿದ್ದ ಕಾರು ಹಿಂಬದಿಯಿಂದ ಸಾರಿಗೆ ಬಸ್​ಗೆ ಡಿಕ್ಕಿಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ.

ಬುಧವಾರ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಕಾರಿನಲ್ಲಿ ಯುವರಾಜ್ ಬರುತ್ತಿದ್ದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣ ಹೊರಹೊಲಯದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು ಬಸ್​ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಕಾರಿನ ಮುಂಭಾಗ ಮತ್ತು ಬಸ್ ಹಿಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಯುವರಾಜ್ ಬಳ್ಳಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಶಿಗ್ಗಾವಿ ಪೊಲೀಸರು ಕಾರು ಮತ್ತು ಬಸ್ಸನ್ನು ವಶಕ್ಕೆ ಪಡೆದು ಠಾಣೆಗೆ ತಂದಿದ್ದಾರೆ.

ಶಾಸಕರ ಪುತ್ರನ ಮೇಲೆ ಕೆಎಸ್​ಆರ್​ಟಿಸಿ ಸಿಬ್ಬಂದಿ ದೂರು ನೀಡಿದ್ದಾರೆ. ಘಟನೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣ ಎಂದು ತಿಳಿದು ಬಂದಿದೆ. ಆರೋಪಿ ಯುವರಾಜ್​ರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)