ಇಂದೋರ್: ಲಾಕ್ಡೌನ್ ಮುಗಿದಿದೆ. ಎಲ್ಲ ರೀತಿಯ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೈಗರಿಕೋದ್ಯಮಿಗಳು ಎರಡು ತಿಂಗಳು ಬಳಿಕ ಉತ್ಪಾದನೆ ಆರಂಭಿಸಿದ್ದಾರೆ. ಆದರೆ, ಮಧ್ಯಪ್ರದೇಶ ಇಂದೋರ್ ಹೊರವಲಯದಲ್ಲಿರುವ ಪಾಲದಾ ಕೈಗಾರಿಕಾ ಪ್ರದೇಶದಲ್ಲಿ ನಡೆದ ಘಟನೆಯ ಬೇರೆ...
ಪಾಲದಾ ಕೈಗಾರಿಕೆ ಪ್ರದೇಶದಲ್ಲಿ ಕಾರ್ಖಾನೆ ಆರಂಭಿಸಿರುವ ಉದ್ಯಮಿಗಳು ಬೆಂಜ್, ಬಿಎಂಡಬ್ಲ್ಯು, ಆಡಿ ಮೊದಲಾದ ಐಷಾರಾಮಿ ಕಾರುಗಳ ಬದಲಾಗಿ ಎತ್ತಿನಗಾಡಿಗಳಲ್ಲಿ ಬರುತ್ತಿದ್ದಾರೆ. ಇದೇನು ಮಿತವ್ಯಯ ಮಂತ್ರವೇ ಎಂದು ಕಲ್ಪಿಸಿಕೊಳ್ಳಬೇಕಿಲ್ಲ. ಸರ್ಕಾರದ ಗಮನವನ್ನು ಸೆಳೆಯಲು ಅವರು ಮಾಡಿದ ತಂತ್ರವಾಗಿತ್ತು.
ಮನೆಗಳಿಂದ ಐಷಾರಾಮಿ ಕಾರುಗಳಲ್ಲಿಯೇ ಹೊರಟ ಅವರು, ಕೈಗಾರಿಕಾ ಪ್ರದೇಶ ಬರುತ್ತಿದ್ದಂತೆ ಕಾರುಗಳನ್ನು ಅಲ್ಲಿಯೇ ನಿಲ್ಲಿಸಿ ಚಕ್ಕಡಿ ಏರಿದರು. ಕಾರುಗಳಿರಲಿ, ಯಾವುದೇ ವಾಹನ ಕೂಡ ಸಂಚರಿಸದಷ್ಟು ಅಲ್ಲಿನ ರಸ್ತೆಗಳು ಹದಗೆಟ್ಟಿವೆ. ಒಮ್ಮೆ ಮಳೆ ಬಂದರೆ ಕೆಸರು, ಗುಂಡಿಮಯ ರಸ್ತೆಯಾಗುತ್ತವೆ ಎಂಬುದು ಅವರ ಆಕ್ರೋಶ. ಹೀಗಾಗಿ ಚಕ್ಕಡಿಯಲ್ಲಿ ಸಾಗುತ್ತಿದ್ದೇವೆ ಎನ್ನುತ್ತಿದ್ದಾರೆ.
ರಾಜ್ಯದಲ್ಲಿರುವ ರಸ್ತೆಗಳ ಸ್ಥಿತಿ ಇದು ಎಂದು ಈ ಚಿತ್ರ ಎಲ್ಲೆಡೆ ವೈರಲ್ ಆಗಿದೆ. ಲಾಕ್ಡೌನ್ ನಂತರದ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉದ್ಯಮಿಗಳ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಮೊದಲು ಅವರಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸವಾಗಲಿ ಎಂಬುದು ಉದ್ಯಮಿಗಳ ಅಳಲಾಗಿದೆ.