ಹಿರಿಯ ನಿರ್ದೇಶಕಿ ಮೀರಾ ನಾಯರ್ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. 2016ರಲ್ಲಿ "ಕ್ವೀನ್ ಆಫ್ ಕಾತ್ವೆ' ನಿರ್ದೇಶಿಸಿದ್ದ ಅವರು 2020ರಲ್ಲಿ "ಎ ಸೂಟಬಲ್ ಬಾಯ್' ಎಂಬ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ಆದರೆ, "ಸಲಾಂ ಬಾಂಬೆ' ಖ್ಯಾತಿಯ ನಿರ್ದೇಶಕಿ ಇದೀಗ ದಶಕದ ಬಳಿಕ ಮತ್ತೆ ಸಿನಿಮಾ ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ಭಾರತ - ಹಂಗೇರಿಯನ್ ಮೂಲದ ಹೆಸರಾಂತ ಕುಂಚ ಕಲಾವಿದೆ ಅಮೃತಾ ಶೇರ್ಗಿಲ್ ಬಯೋಪಿಕ್ ಮಾಡಲು ಮೀರಾ ಮುಂದಾಗಿದ್ದಾರೆ. ಚಿತ್ರಕ್ಕೆ "ಅಮ್ರಿ' ಎಂದು ನಾಮಕರಣ ಮಾಡಲಾಗಿದೆ.
2020ರಲ್ಲೇ ಸಿನಿಮಾ ಘೋಷಿಸಿದ್ದರಾದರೂ, 2025ರವರೆಗೆ ಶೂಟಿಂಗ್ ಪ್ರಾರಂಭಿಸಿರಲಿಲ್ಲ. ಅಮೃತಾ ಪಾತ್ರಕ್ಕೆ ನಟಿ ತಾನ್ಯಾ ಮಾನಿಕ್ತಲಾರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ತಾನ್ಯಾ ಕೆಲ ದಿನಗಳಲ್ಲೇ ತಂಡದಿಂದ ಹೊರನಡೆದ ಕಾರಣ, ಮೀರಾ ನಾಯಕಿಯ ಪಾತ್ರದ ಆಯ್ಕೆಯಲ್ಲಿ ಬಿಜಿಯಾಗಿದ್ದರು. ಕಳೆದ ವರ್ಷ ವಿವಾದಕ್ಕೀಡಾಗಿದ್ದ "ಬ್ಯಾಡ್ ಗರ್ಲ್' ಚಿತ್ರದ ನಟಿ ಅಂಜಲಿ ಶಿವರಾಮನ್ರನ್ನು ಅಮೃತಾ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು, ಅವರು ಈಗಾಗಲೇ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದಂತ ಎಮಿಲಿ ವಾಟ್ಸನ್, ಜೈದೀಪ್ ಅಹ್ಲಾವತ್, ಪ್ರಿಯಾಂಕಾ ಚೋಪ್ರಾ ಜೊನಾಸ್, ಜಿಮ್ ಸರ್ಭ್ ಪ್ರಮುಖ ತಾರಾಗಣದಲ್ಲಿ ನಟಿಸಲಿದ್ದಾರೆ. ಅಮೃತ್ಸರ, ಫ್ರಾನ್ಸ್ ಮತ್ತು ಹಂಗೇರಿಯಲ್ಲಿ ಚಿತ್ರದ ಶೂಟಿಂಗ್ ನಡೆಸಲು ಮೀರಾ ನಾಯರ್ ಯೋಜಿಸಿದ್ದಾರೆ.
ಯಾರು ಅಮೃತಾ ಶೇರ್ಗಿಲ್?
ಅಮೃತಾ ಶೇರ್ಗಿಲ್ ಭಾರತ ಮೂಲದ ಹಂಗೇರಿ ಕುಂಚ ಕಲಾವಿದೆ. 1913ರಲ್ಲಿ ಜನಿಸಿದ ಅವರು 1941ರಲ್ಲಿ ಕೇವಲ 28ನೇ ವಯಸ್ಸಿನಲ್ಲೇ ವಿಧಿವಶರಾದರು. ಆದರೆ, ಸಣ್ಣ ವಯಸ್ಸಿಗೇ 20ನೇ ಶತಮಾನದ ಶ್ರೇಷ್ಠ ಕುಂಚ ಕಲಾವಿದೆಯರಲ್ಲಿ ಒಬ್ಬರಾಗಿ ಅಮೃತಾ ಕೂಡ ಸ್ಥಾನ ಪಡೆದಿದ್ದರು. ಏಷಿಯಾ ಮತ್ತು ಯೂರೋಪ್ ಎರಡೂ ಪ್ರದೇಶಗಳ ಜನ-ಜೀವನದ ಅರವಿದ್ದ ಅವರು ಪ್ರಯೋಗಾತ್ಮಕ ಮತ್ತು ಆಧುನಿಕ ಕಲೆಗಳ ಮೂಲಕ ಹೆಸರುವಾಸಿಯಾಗಿದ್ದರು. ಈಗಲೂ ಅವರ ಪೇಂಟಿಂಗ್ಗಳಿಗೆ ಹೆಚ್ಚು ಬೇಡಿಕೆಯಿದ್ದು, ಅವರು ರಚಿಸಿದ್ದ "ಸ್ಟೋರಿ ಟೆಲ್ಲರ್' ಎಂಬ ಪೇಂಟಿಂಗ್ 2023ರಲ್ಲಿ ಬರೋಬ್ಬರಿ <61.8 ಕೋಟಿಗೆ ಹರಾಜಾಗಿತ್ತು.