ನಗರದಲ್ಲಿ ವಿಶ್ವ ತಂಬಾಕು ರಹಿತ ದಿನ ಹಾಗೂ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ತಹಸೀಲ್ದಾರ್ ಬಿ.ಎನ್.ಗಿರೀಶ್ ಉದ್ಘಾಟಿಸಿದರು. ಡಾ. ಓ.ಮಲ್ಲಪ್ಪ, ಡಾ. ಬಿ.ಜಿ.ಚಂದ್ರಶೇಖರ್, ದೊಡ್ಡವೀರಪ್ಪ, ಬಿ.ಎಸ್.ಬಸವರಾಜ್ಗೌಡ ಇದ್ದರು. 
ನ್ಯೂಸ್

ಪರಿಸರದ ಮೇಲೂ ತಂಬಾಕು ದುಷ್ಪರಿಣಾಮ: ತಹಸೀಲ್ದಾರ್ ಗಿರೀಶ್

ಶಿವಮೊಗ್ಗ: ತಂಬಾಕು ಕೇವಲ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಷ್ಟೇ ಅಲ್ಲ, ಪರಿಸರದ ಮೇಲೂ ಅನೇಕ ದುಷ್ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನ ನಡೆಸುವಂತೆ ಯುವಪೀಳಿಗೆಗೆ ತಹಸೀಲ್ದಾರ್ ಬಿ.ಎನ್.ಗಿರೀಶ್ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಊರುಗಡೂರಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಮಲ್ನಾಡ್ ಲೈಫ್‌ಲೈನ್ ಆಸ್ಪತ್ರೆ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನ ಹಾಗೂ ಗುಲಾಬಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧೂಮಪಾನಿಗಳು ಸೇದಿ ಬಿಸಾಡುವಂತಹ ಸಿಗರೇಟ್ ತುಂಡುಗಳು ಮಣ್ಣಿನಲ್ಲಿ ಕರಗದೆ ಭೂಮಿ ಮೇಲೆ ಪರಿಸರವನ್ನು ಕಲುಷಿತಗೊಳಿಸುವ ಜತೆಗೆ ಭೂಮಿಯ ಒಳಭಾಗದ ಅಂತರ್ಜಲವನ್ನು ಸಹ ಕಲುಷಿತಗೊಳಿಸುತ್ತದೆ. ಹಾಗೆಯೇ ಮಳೆ ನೀರಿನ ಜತೆ ನದಿಗಳಲ್ಲಿ ಸೇರಿಕೊಂಡು ನದಿಗಳ ಮೂಲಕ ಸಮುದ್ರ ಸೇರುತ್ತವೆ. ಸೇರಿದ ನಂತರ ಅಲ್ಲಿನ ನೀರನ್ನು ಕಲುಷಿತಗೊಳಿಸಿ ಅನೇಕ ಜನಚರ ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಓ.ಮಲ್ಲಪ್ಪ ಮಾತನಾಡಿ, ವಿಶ್ವದಲ್ಲಿ 80 ಲಕ್ಷಕ್ಕೂ ಅಧಿಕ ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಉದ್ಯಮ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಈ ವರ್ಷದ ಘೋಷವಾಕ್ಯವಾಗಿದೆ ಎಂದರು. ಮಲ್ನಾಡ್ ಲೈಫ್ ಆಸ್ಪತ್ರೆ ವೈದ್ಯ ಡಾ. ಇರ್ಫಾನ್ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಹಾಗೂ ಗುಲಾಬಿ ಆಂದೋಲನ ನೆರವೇರಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್.ಬಸವರಾಜ್ಗೌಡ ಮತ್ತಿತರರು ಉಪಸ್ಥಿತರಿದ್ದರು.