ಬೆಂಗಳೂರು: ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ಅಭಿವೃದ್ಧಿ ಕುಂಠಿತ ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಲು ಪ್ರತಿಪಕ್ಷ ಬಿಜೆಪಿ ತಯಾರಾಗಿದೆ. ಆ ಮೂಲಕ ಮುಂದಿನ ಚುನಾವಣೆಗಳಿಗೆ ಭೂಮಿಕೆ ಸಿದ್ಧಪಡಿಸಲು ಮುಂದಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಂತರ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಇದೇ ವರ್ಷ ನಡೆಯುವ ಸಾಧ್ಯತೆಗಳಿವೆ. ಈ ಲೆಕ್ಕಾಚಾರದಲ್ಲೇ ಸಂಘಟನೆಗೆ ಶಕ್ತಿ, ಕಾರ್ಯಕರ್ತರಲ್ಲಿ ಆಸಕ್ತಿ ಹೆಚ್ಚಿಸಲು ಕಮಲಪಡೆ ಯೋಚಿಸಿದೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ವ್ಯಾಪ್ತಿ ಸಂಸದ, ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರ ಸಭೆ ಶುಕ್ರವಾರ ನಡೆಯಿತು.
‘ಬ್ರ್ಯಾಂಡ್ ಬೆಂಗಳೂರು’ ಎಂದು ಸಾರಿದ್ದೇ ಬಂತು. ನಯಾ ಪೈಸೆಯಷ್ಟು ಅನುದಾನವಿಲ್ಲ. ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು. ‘ಬ್ಯಾಡ್ ಬೆಂಗಳೂರು’ ಮಾಡಿದ ಸರ್ಕಾರವನ್ನು ಬಡಿದೆಬ್ಬಿಸಬೇಕಾದ ಅಗತ್ಯವಿದೆ.
ಇದಕ್ಕಾಗಿ ವಾರ್ಡ್‌ಮಟ್ಟದಿಂದಲೂ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಿ, ಮೊದಲ ಹಂತವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ (ಮೇ 28) ಬೆಳಗ್ಗೆ 11ಕ್ಕೆ ಹೋರಾಟ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಭೆ ತೀರ್ಮಾನಿಸಿತು.
ಸಭೆಯನ್ನು ಉದ್ದೇಶಿಸಿ ಬಿ.ವೈ.ವಿಜಯೇಂದ್ರ ಮಾತನಾಡಿ ರಾಜಧಾನಿ ಜನರಿಗೆ ಸಮಸ್ಯೆಗಳ ದೌರ್ಭಾಗ್ಯವನ್ನು ಕಾಂಗ್ರೆಸ್ ಸರ್ಕಾರ ಕರುಣಿಸಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಬೆಂಗಳೂರು ಅಭಿವೃದ್ಧಿಗೆ ಬಿಡಿಗಾಸು ನೀಡಿಲ್ಲ.
ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಕಾರಣ ಗುಂಡಿಬಿದ್ದ ರಸ್ತೆಗಳು, ವಿಲೇವಾರಿಯಾಗದ ಕಸದ ರಾಶಿ ಮತ್ತಿತರ ಸಮಸ್ಯೆಗಳಲ್ಲಿ ಬೆಂಗಳೂರು ನಗರ ಸಿಲುಕಿದೆ ಎಂದು ದೂರಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಬಿ.ವೈ.ವಿಜಯೇಂದ್ರ ಮಾತನಾಡಿ ಬೆಂಗಳೂರಿನಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ಜನರಿದ್ದಾರೆ. ಕಳೆದೊಂದು ವರ್ಷದಿಂದ ಬೆಂಗಳೂರು ಅಭಿವೃದ್ಧಿಗೆ ಒಂದು ರೂಪಾಯಿ ಸಹ ಕೊಡದೆ ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ, ಕಸ ವಿಲೇವಾರಿಯಾಗುತ್ತಿಲ್ಲ. ಅತೀ ಹೆಚ್ಚು ಮಂತ್ರಿಗಳು ಬೆಂಗಳೂರಿನಿಂದ ಇದ್ದರೂ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣಕ್ಕೆ ಸರ್ಕಾರದ ವಿರುದ್ಧ ಮಂಗಳವಾರ ಬೃಹತ್ ಹೋರಾಟ ರೂಪಿಸಿದ್ದೇವೆ. ನಂತರವೂ ವಾರ್ಡ್‌ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡುತ್ತೇವೆ. ‘ಬ್ರ್ಯಾಂಡ್ ಬೆಂಗಳೂರು’ಗೆ ಎಷ್ಟು ಹಣ ಬಿಡುಗಡೆ ಮಾಡಿದೆ, ಯಾವುದಕ್ಕೆಲ್ಲ ಖರ್ಚು ಮಾಡಿದೆ ಎಂಬ ಲೆಕ್ಕ ಕೊಡಬೇಕು. ನಾವು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಲೆಕ್ಕ ಕೊಡುತ್ತೇವೆ ಎಂದು ಕುಟುಕಿದರು.
‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ಹೇಳಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದರು. ಅತಿಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ ಅಭಿವೃದ್ಧಿ ಕುಂಠಿತವಾಗಿದೆ. ಹೀಗಾಗಿ ನಮ್ಮ ತೆರಿಗೆ ಎಲ್ಲಿ ಹೋಯಿತು ? ಎಂದು ಬೆಂಗಳೂರಿನ ಜನರು ಕೇಳುತ್ತಿದ್ದು, ಅದಕ್ಕೂ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.