ಕೊಲ್ಕತ್ತಾ: ಫ್ಲ್ಯಾಟ್ ಕೊಡಿಸುವುದಾಗಿ ವೃದ್ಧರಿಗೆ ನಂಬಿಸಿ, ಹಣ ಪಡೆದು ವಂಚಿಸಿದ ಆರೋಪದಲ್ಲಿ ತೃಣ ಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸ್ರತ್ ಜಹಾನ್ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ವಿಚಾರಣೆ ನಡೆಸಿದೆ.
2014-15ರಲ್ಲಿ ಸವೆನ್ ಸೆನ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆಯು ಕೈಗೆಟುಕುವ ದರದಲ್ಲಿ ಫ್ಲಾಟ್ ನೀಡುವುದಾಗಿ ಜನರನ್ನು ನಂಬಿಸಿತ್ತು. ಸುಮಾರು 400ಕ್ಕೂ ಅಧಿಕ ಹಿರಿಯ ನಾಗರಿಕರಿಗೆ 1000 ಚದರ ಅಡಿಯ ಫ್ಲ್ಯಾಟ್ ಕೊಡಿಸುವುದಾಗಿ ಮುಂಗಡವಾಗಿ ಪ್ರತಿಯೊಬ್ಬರಿಂದಲೂ 5.5 ಲಕ್ಷ ರೂ ಹಣವನ್ನೂ ಸ್ವೀಕರಿಸಿತ್ತು. ಆದರೆ ಫ್ಲ್ಯಾಟ್ ನೀಡದೇ, ಹಣವನ್ನೂ ವಾಪಾಸ್ ಕೊಡದೆ ವಂಚಿಸಿದೆ. ಈ ಸಂಸ್ಥೆಯ ನಿದೇರ್ಶಕಿಯಾಗಿದ್ದ ನುಸ್ರತ್ ಜಹಾನ್ ಮತ್ತಿತರ ಸದಸ್ಯರ ವಿರುದ್ಧ ಬಿಜಿಪಿ ನಾಯಕ ಶಂಕುದೇವ್ ಪಂಡ ಸಹಾಯದಲ್ಲಿ ಮೋಸ ಹೋದವರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಜಾರಿ ನಿರ್ದೇಶನಾಲಯದ ಕಛೇರಿಗೆ ನುಸ್ರತ್ರವರನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಬಿಜೆಪಿಯ ರಾಜ್ಯ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ಈ ಕುರಿತು ಪ್ರತಿಕ್ರಿಯಿಸಿ "ಇದು ಮೋದಿ ಸರ್ಕಾರ, ನೀವು ಮುಖ್ಯಮಂತ್ರಿ, ಫಿಲ್ಮ್ ಸ್ಟಾರ್ ಅಥವಾ ರಾಜಕಾರಣಿ, ಯಾರೇ ಆಗಿದ್ದರೂ ಜನರನ್ನು ಮೋಸ ಮಾಡುವಂತಿಲ್ಲ. ನಿವೃತ್ತಿ ಹೊಂದಿದ್ದ ಜನರು ತಮ್ಮ ಜೀವಮಾನದ ಉಳಿತಾಯದ ಕೋಟಿ ಕೋಟಿ ಹಣವನ್ನು ನುಸ್ರತ್ ಜಹಾನ್ ಬಳಿ ನೀಡಿದ್ದರು. ಆದರೆ ಅವರ ಪಾಲಿಗೆ ಈಗ ದುಡ್ಡೂ ಇಲ್ಲ, ಫ್ಲ್ಯಾಟ್ ಕೂಡಾ ಇಲ್ಲ. ಈಗ ತನಿಖೆ ನಡೆಯುತ್ತಿದ್ದು, ಸಾಕ್ಷಿ ಸಿಕ್ಕಲ್ಲಿ ನುಸ್ರತ್ಗೆ ಸರಿಯಾದ ಶಿಕ್ಷೆಯಾಗಲಿದೆ" ಎಂದಿದ್ದಾರೆ.
ಪಶ್ಚಿಮ ಬಂಗಾಳದ ಬಸಿರ್ಹತ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ನುಸ್ರತ್ ಜಹಾನ್ ತೃಣ ಮೂಲ ಕಾಂಗ್ರೆಸ್ನ ನಾಯಕಿ. 2021ರಲ್ಲಿ ನಟ ದಾಸ್ ಗುಪ್ತಾರನ್ನು ಮದುವೆಯಾಗಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.