ನ್ಯೂಸ್

ಪಾಕ್‍ನಲ್ಲಿ ಚೀನಾ ಇಂಜಿನಿಯರ್‌ಗಳ ಮೇಲೆ ಉಗ್ರರ ದಾಳಿ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದಾರ್‌ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಎಂಜಿನಿಯರ್‌ಗಳ ಮೇಲೆ ಭಾನುವಾರ ಬಲೂಚಿ ಬಂಡುಕೋರರ ಗುಂಪು ಗುಂಡಿನ ದಾಳಿ ನಡೆಸಿದೆ.


ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 4 ಚೀನಾ ಪ್ರಜೆಗಳು ಹಾಗೂ 9 ಪಾಕ್ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ವೇಳೆ ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿ ಬಂಡುಕೋರರ ಗುಂಪು ಆಯಕಟ್ಟಿನ ಗ್ವಾದಾರ್‌ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೀನಾ ಎಂಜಿನಿಯರ್‌ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ.

ಘಟನೆಯ ಹೊಣೆಯನ್ನು ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ ಹೊತ್ತುಕೊಂಡಿದೆ.
ಈ ಯೋಜನೆಯಿಂದ ಸ್ಥಳೀಯರಿಗೆ ಯಾವುದೇ ಲಾಭ ಇಲ್ಲ ಎಂದು ವಾದಿಸುತ್ತಿರುವ ಈ ಸಂಘಟನೆ, ಈ ಹಿಂದೆಯೂ ಯೋಜನಾ ಪ್ರದೇಶದಲ್ಲಿ ದಾಳಿ ನಡೆಸಿತ್ತು. ದಾಳಿ ನಡೆದ ಸ್ಥಳವನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಸುತ್ತುವರೆದಿದ್ದು, ಇಬ್ಬರು ಉಗ್ರರನ್ನು ಸಾಯಿಸಿವೆ. ಅಡಗಿರಬಹುದಾದ ಇನ್ನಷ್ಟು ಬಂಡುಕೋರರಿಗಾಗಿ ಹುಡುಕಾಟ ನಡೆಸಿವೆ.


ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಬಂದರು ನಗರವಾದ ಗ್ವಾದರ್‍ನಾದ್ಯಂತ ಸ್ಫೋಟಗಳು ಮತ್ತು ಗುಂಡಿನ ಸದ್ದು ಕೇಳಿಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಬಂದರು ಹಾಗೂ ಪ್ರಮುಖ ಸ್ಥಳಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.